ಬೆಂಗಳೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಿಸುವ ಸಲುವಾಗಿ ಪ್ರವೇಶಾತಿ ಅಭಿಯಾನ 2025-26 ಹಮ್ಮಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಪದವಿ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನವನ್ನು ನೀಡಿ, ಶೇಕಡಾವಾರು Gross Enrollment Ratio (GER) ವನ್ನು ಹೆಚ್ಚಿಸುವುದು ಹಾಗೂ ನಗರ, ಗ್ರಾಮೀಣ ಮತ್ತು ಅತಿ ಹಿಂದುಳಿದ ಪ್ರದೇಶಗಳಲ್ಲಿನ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ 2025-26 ಸಾಲಿನಲ್ಲಿ “ಪ್ರವೇಶಾತಿ ಅಭಿಯಾನ 2025-26ನ್ನು ಕೈಗೊಳ್ಳಲಾಗುತ್ತಿದ್ದು, ಈ ಸಂಬಂಧ ದಿನಾಂಕ: 30-01-2025 ಹಾಗೂ 31-01-2025 ರಂದು ಪ್ರವೇಶಾತಿ ಅಭಿಯಾನದ ಆನ್‌ಲೈನ್ ಪೂರ್ವಭಾವಿ ಸಭೆಯಲ್ಲಿ ಪ್ರಾಂಶುಪಾಲರುಗಳಿಗೆ ಸೂಚಿಸಿರುವಂತೆ, ತಮ್ಮ ಕಾಲೇಜುಗಳಿಗೆ ಹಂಚಿಕೆ ಮಾಡಿರುವ ಎಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ 2025 ರ ಫೆಬ್ರವರಿ ತಿಂಗಳೊಳಗೆ ಭೇಟಿ ನೀಡಿ, ಅರ್ಹ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಲಭ್ಯವಿರುವ ಕೋರ್ಸುಗಳು ಮತ್ತು ಅವುಗಳಿಂದ ದೊರಕುವ ಉದ್ಯೋಗಾವಕಾಶಗಳ ಬಗ್ಗೆ ಪರಿಚಯಿಸಿ, ಮನದಟ್ಟು ಮಾಡಿ, ಪದವಿ ಕಾಲೇಜುಗಳಲ್ಲಿ ಪ್ರವೇಶಾತಿ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರುಗಳು ಈ ಕೆಳಕಂಡ ಸೂಚನೆಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ.
ಸೂಚನೆಗಳು
ಆಯಾ ಕಾಲೇಜುಗಳಲ್ಲಿ ಪ್ರವೇಶಾತಿ ಸಮಿತಿಯನ್ನು ರಚಿಸಿ, ಸುತ್ತಮುತ್ತ ಇರುವ ತಮ್ಮ ಕಾಲೇಜಿಗೆ ಹಂಚಿಕೆ ಮಾಡಲಾದ ಪದವಿ ಪೂರ್ವ ಕಾಲೇಜುಗಳನ್ನು ಅಧ್ಯಾಪಕ ಸದಸ್ಯರಿಗೆ ಹಂಚಿಕೆ ಮಾಡಿ, ಪ್ರವೇಶಾತಿ ಅಭಿಯಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಫೆಬ್ರವರಿ-2025ರೊಳಗೆ ನಡೆಸುವುದು.
2025-26ನೇ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿ ಪ್ರಮಾಣದ (Sanctioned Intake) ಕನಿಷ್ಠ 75% ಪ್ರವೇಶಾತಿಯನ್ನು ಭರ್ತಿ ಮಾಡಲು ಕ್ರಮ ವಹಿಸುವುದು ಹಾಗೂ 2024-25ನೇ ಶೈಕ್ಷಣಿಕ ಸಾಲಿನಲ್ಲಿ 75% ಕ್ಕಿಂತ ಹೆಚ್ಚಿನ ಪ್ರವೇಶಾತಿ ಮಾಡಿರುವ ಕಾಲೇಜುಗಳು ಹಿಂದಿನ ಶೈಕ್ಷಣಿಕ ವರ್ಷಕ್ಕಿಂತ ಕನಿಷ್ಠ ಶೇ.10% ರಷ್ಟು ಪ್ರವೇಶಾತಿ ಸಂಖ್ಯೆಯನ್ನು ಕಡ್ಡಾಯವಾಗಿ ಹೆಚ್ಚಳ ಮಾಡುವುದು.
ಪ್ರವೇಶಾತಿ ಪ್ರಕ್ರಿಯೆಯಲ್ಲಿ, ಖಾಯಂ ಅಧ್ಯಾಪಕರ ಉಪಸ್ಥಿತಿಯೊಂದಿಗೆ Admission Desk ನಲ್ಲಿ Rotation ಆಧಾರದ ಮೇಲೆ ಕಾರ್ಯ ನಿರ್ವಹಿಸುವುದು ಕಡ್ಡಾಯವಾಗಿರುತ್ತದೆ.
ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊದಲನೇ ವರ್ಷದಲ್ಲಿ ಪ್ರವೇಶಾತಿಯನ್ನು ಪಡೆದು ನಂತರದಲ್ಲಿ ಪರೀಕ್ಷಾ ಅರ್ಜಿಯನ್ನು ಭರ್ತಿ ಮಾಡದೇ ಇರುವುದು ಹಾಗೂ ಮುಂದಿನ ತರಗತಿಗಳಿಗೆ ಪ್ರವೇಶಾತಿಯನ್ನು ಪಡೆಯದೇ ಇರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಯಾವುದೇ ಸ್ಟ್ರೀಮ್/ಕೋರ್ಸ್‌ನಲ್ಲಿ ವಿದ್ಯಾರ್ಥಿಗಳ Dropout ದರವು 25% ಮೀರಿದರೆ, ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.
2025 ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ದಾಖಲಾತಿ ಅಭಿಯಾನದಲ್ಲಿ ಕೈಗೊಂಡ ಕಾರ್ಯಕ್ರಮಗಳ ವಿವರಗಳನ್ನು ಪ್ರತಿ ಶುಕ್ರವಾರ ಇಲಾಖೆ ಹೊರಡಿಸುವ Google form ನಲ್ಲಿ ಭರ್ತಿ ಮಾಡುವುದು ಹಾಗೂ ಸದರಿ ವರದಿಯನ್ನು ಆಯಾ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಸಲ್ಲಿಸುವುದು.