ಕಲಬುರ್ಗಿ : ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಆರೋಪದಲ್ಲಿ ಐವರು ಪುಂಡರನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಹೌದು ಕಲಬುರಗಿ ನಗರದ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆಝಾದಪುರದ ಉಮರ್ ಕಾಲನಿ ನಿವಾಸಿಗಳಾದ ಗುಲಾಮ್ ನಬಿ ಅಲಿಯಾಸ್ ಬಿಲಾಲ್(21), ಮುಹಮ್ಮದ್ ಪರ್ವೇಶ್(27), ಶೇಕ್ ಶೋಯೆಬ್(22), ಸೈಯದ್ ಕದೀರ್(24), ಗರೀಬ್ ನವಾಝ್ ಕಾಲನಿ ನಿವಾಸಿ ಅಸ್ಲಂ (24) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ಮೊದಲ ಆರೋಪಿಯಾಗಿರುವ ಗುಲಾಮ್ ನಬಿ ವಿರುದ್ಧ ಇಲ್ಲಿನ ವಿಶ್ವವಿದ್ಯಾನಿಲಯ ಪೊಲೀಸ್ ಠಾಣೆಯಲ್ಲಿ ಕಲಂ 28 ಭಾರತೀಯ ಆಯುಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಉಳಿದ ನಾಲ್ವರು ಆರೋಪಿಗಳ ವಿರುದ್ಧ ಕಲಂ 129 BNSS (PAR)ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾರಕಾಸ್ತ್ರಗಳನ್ನ ಹಿಡಿದು ರೀಲ್ಸ್ ಮಾಡುವ ಮೂಲಕ ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದ ಗ್ಯಾಂಗ್ ಇದಾಗಿತ್ತು. ಬಂಧಿತರಿಂದ ಪಿಸ್ತೂಲ್, ತಲವಾರ್, ಚಾಕು ಸೇರಿದಂತೆ ಇನ್ನಿತರ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.