ಹಾವೇರಿ : ಇಲ್ಲಿನ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಜ್ಯೋತಿ ಎಂಬಾಕೆ ಬಾಲಕನ ಗಾಯಕ್ಕೆ ಹೊಲಿಗೆ ಹಾಕೋ ಬದಲು ಫೆವಿಕ್ವಿಕ್ ಹಾಕಿ ಅಂಟಿಸಿ ಕಳುಹಿಸಿದ್ದ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆಟವಾಡುವ ವೇಳೆ ಬಿದ್ದು ಗಾಯಗೊಂಡಿದ್ದ 7 ವರ್ಷದ ಬಾಲಕ ಗುರುಶಿಕನ್ ಅಣ್ಣಪ್ಪ ಹೊಸಮನಿಯನ್ನು ಈ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆತರಲಾಗಿತ್ತು.
ಆದ್ರೆ ಈ ವೇಳೆ ವೈದ್ಯರಿಲ್ಲದ ಕಾರಣ ನರ್ಸ್ ಜ್ಯೋತಿ ಗಾಯಗೊಂಡಿದ್ದ ಜಾಗಕ್ಕೆ ಡ್ರೆಸ್ಸಿಂಗ್ ಮಾಡಿ, ಫೆವಿಕ್ವಿಕ್ ಹಚ್ಚಿ, ಅದರ ಮೇಲೆ ಬ್ಯಾಂಡೇಜ್ ಟೇಪ್ ಹಚ್ಚಿ ಕಳುಹಿಸಿದ್ದಳು.ಈ ಬಗ್ಗೆ ವ್ಯಾಪಕ ಟೀಕೆ ಮತ್ತು ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಯಾಕೆ ಈ ರೀತಿ ಮಾಡಿದ್ದೀರಿ ಎಂದು ವ್ಯಕ್ತಿಯೊಬ್ಬರು ನರ್ಸ್ ಅನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನರ್ಸ್ ದರ್ಪ ಮೆರೆದಿದ್ದು, ತಾನು ಮಾಡಿದ್ದೇ ಸರಿ ಎಂಬಂತೆ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾಳೆ.
ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ, ನರ್ಸ್ ಜ್ಯೋತಿ ಅವರನ್ನು ಅಮಾನತು ಮಾಡಲಾಗಿದೆ. ಈ ಕುರಿತು ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಸಭೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯಲಾಗಿರುತ್ತದೆ.ಫೆವಿಕ್ನಿಕ್ ಒಂದು ಅಂಟುದ್ರಾವಣವಾಗಿದ್ದು ವೈದ್ಯಕೀಯ ಬಳಕೆಗೆ ನಿಯಮದಲ್ಲಿ ಅವಕಾಶ ಇರುವುದಿಲ್ಲ. ಸದರಿ ಪ್ರಕರಣದಲ್ಲಿ ಮಗುವಿನ ಚಿಕಿತ್ಸೆಗೆ ಫೆವಿಕ್ನಿಕ್ ಬಳಸಿ ಕರ್ತವ್ಯ ಲೋಪವೆಸಗಿರುವ ಸಿಬ್ಬಂದಿ (ಸ್ನಾಫ್ ನರ್ಸ್) ರವರನ್ನು ಪ್ರಾಥಮಿಕ ವರದಿ ಪಡೆದು ನಿಯಮಾನುಸಾರ ಪರಿಶೀಲಿಸಿ ಅಮಾನತ್ತುಗೊಳಿಸಲು ಕ್ರಮವಹಿಸಲಾಗಿರುತ್ತದೆ.
ಚಿಕಿತ್ಸೆಗೆ ಒಳಪಟ್ಟ ಮಗು ಆರೋಗ್ಯವಾಗಿದ್ದು ಅಡ್ಡ ಪರಿಣಾಮಗಳ ಬಗ್ಗೆ, ನಿಗಾ ಇರಿಸಲು ಸಂಬಂಧಪಟ್ಟ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿರುತ್ತದೆ.ಮೇಲ್ಕಂಡ ವಿಷಯವನ್ನು ಅವಗಾಹನೆಗೆ ತರುತ್ತಾ, ಸದರಿ ಸ್ಪಷ್ಟನೆಯನ್ನು ಪತ್ರಿಕೆಗಳ ನಾಳಿನ (06-02-2025) ಸಂಚಿಕೆಯಲ್ಲಿ ಪ್ರಕಟಿಸಲು ಈ ಮೂಲಕ ಕೋರಲಾಗಿದೆ.