ಬೆಂಗಳೂರು : ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದಿಂದ ಭಾರತದಲ್ಲಿಯೇ ಮೊದಲ ACT1 (ಬೋಗಿ ಕವರ್ಡ್ ಟಾಲರ್ ಹೈಟ್ ಆಟೋ-ಕಾರ್ ಕ್ಯಾರಿಯರ್) ರೇಕ್ ಇಂದು ಸಂಚರಿಸಿತು. ಈ ರೇಕ್ 264 ಎಸ್.ಯು.ವಿ. (ಸ್ಪೋರ್ಟ್ ಯುಟಿಲಿಟಿ ವೆಹಿಕಲ್) ಕಾರುಗಳನ್ನು ಹೊತ್ತು ಪೆನುಕೊಂಡದಿಂದ ಹರಿಯಾಣದ ಗುರ್ಗಾಂವ್ ಜಿಲ್ಲೆಯ ಫರ್ರುಖ್ ನಗರಕ್ಕೆ ಸಾಗಿತು.
ಈ ಸರಕು ಸಾಗಣೆಯಿಂದ ರೈಲ್ವೆಗೆ ₹34 ಲಕ್ಷ ಆದಾಯ ಬಂದಿದೆ.ACT1 ರೇಕ್, 33 ವಿಶೇಷವಾಗಿ ವಿನ್ಯಾಸಗೊಳಿಸಿದ ವ್ಯಾಗನ್‌ಗಳನ್ನು ಒಳಗೊಂಡಿದ್ದು, 264 SUV ಕಾರುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ವ್ಯವಸ್ಥೆ ಭಾರತದಾದ್ಯಂತ ದೊಡ್ಡ ವಾಹನಗಳ ಸಾಗಾಣಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದ್ದು, ಇದು ಸದ್ಯ ಬಳಕೆಯಲ್ಲಿರುವ BCACBM ರೇಕ್ ಗಳಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದೆ.
ACT1 ರೇಕ್ ವೈಶಿಷ್ಟ್ಯಪೂರ್ಣ ಡಬಲ್-ಡೆಕರ್ ವಿನ್ಯಾಸವನ್ನು ಹೊಂದಿದ್ದು SUVಗಳನ್ನು ಎರಡೂ ಡೆಕ್( ಮೇಲೆ ಮತ್ತು ಕೆಳಗೆ) ಗಳಲ್ಲಿ ಲೋಡ್ ಮಾಡಬಹುದಾಗಿದೆ. ಇದರಿಂದ ಒಟ್ಟಾರೆ ವಾಹನ ಸಾಗಣೆಯ ಸಾಮರ್ಥ್ಯ ವೃದ್ಧಿಯಾಗಲಿದ್ದು ಇದರಿಂದ ವಾಹನ ಸಾಗಣೆ ವೆಚ್ಚ ಇಳಿಕೆಯಾಗಲಿದೆ.ACT1 ರೇಕ್‌ನ ಮೊದಲ ಸಾರಿಗೆ ಕಾರ್ಯಾಚರಣೆಯನ್ನು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಮಿತೇಶ್ ಕುಮಾರ್ ಸಿನ್ಹಾ, ಮತ್ತು ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಪರಿಕ್ಷಿತ್ ಮೋಹನ್ ಪುರಿಯಾ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ಕೆ.ಕೃಷ್ಣ ಚೈತನ್ಯ ಮತ್ತಿತರ ಹಿರಿಯ ರೈಲ್ವೆ ಅಧಿಕಾರಿಗಳು ವೀಕ್ಷಿಸಿದರು.
ACT1 ರೇಕ್ ಗಳು ಸ್ಥಿರ, ಮಿತವ್ಯಯ ಮತ್ತು ವೇಗದ ಸಾರಿಗೆ ಆಯ್ಕೆಯನ್ನು ಒದಗಿಸುತ್ತದೆ. 33 ACT1 ವ್ಯಾಗನ್‌ಗಳು ಹೊಂದಿರುವ ಪ್ರತಿ ರೇಕ್, 264 SUV ಕಾರುಗಳನ್ನು ಸಾಗಿಸಲು ಸಾಮರ್ಥ್ಯವನ್ನು ಹೊಂದಿದ್ದು, ಇದು ಒಂದೇ ಬಾರಿಗೆ ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಸಾಗಿಸಲು ಅನುವು ಮಾಡಿಕೊಡುತ್ತದೆ.ACT1 ರೇಕ್ ಆಟೋಮೋಟಿವ್ ಉದ್ಯಮದ ಸಾಗಾಣಿಕಾ ಸಾಮರ್ಥ್ಯವನ್ನು ಹೆಚ್ಚಿಸಿ, ವೆಚ್ಚಗಳನ್ನು ಕಡಿಮೆ ಮಾಡುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಈ ಮೂಲಕ ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಸಮರ್ಥವಾಗಿ ಸಾಗಿಸಲು ಸಹಾಯ ಮಾಡುತ್ತದೆ.