ಬೆಳಗಾವಿ : ಬೆಳಗಾವಿಯಲ್ಲಿ ಬೆಚ್ಚಿಬಿಳಿಸುವ ಘಟನೆ ನಡೆದಿದ್ದು, ಪತಿಯೊಬ್ಬ ಕುಡಿದ ಮತ್ತಿನಲ್ಲಿ ಪತ್ನಿಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಉಪ್ಪಾರಟ್ಟಿ ಎಂಬ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಪತ್ನಿಯನ್ನು ಮೀರಾಬಾಯಿ (25) ಎಂದು ತಿಳಿದುಬಂದಿದ್ದು, ಬಾಲಾಜಿ ಕಬಲಿ (35) ತನ್ನ ಪತ್ನಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮಹಾರಾಷ್ಟ್ರ ಮೂಲದ ದಂಪತಿ ಕಬ್ಬು ಕಟಾವು ಗ್ಯಾಂಗ್ ಜೊತೆ ಉಪ್ಪಾರಟ್ಟಿಗೆ ಕೆಲಸಕ್ಕೆ ಬಂದಿದ್ದರು. ಈ ವೇಳೆ, ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.
ಇಷ್ಟಾದರೂ ಕೂಡ ಪತಿಯ ಕೃತ್ಯ ಇಷ್ಟಕ್ಕೆ ನಿಲ್ಲದ. ತಾನು ಏನೋ ದೊಡ್ಡ ಘನಂದಾರಿ ಕೆಲಸ ಮಾಡಿರೋ ಥರ ಕೊಲೆಯ ಬಳಿಕ ಆರೋಪಿಯು ಸಂಬಂಧಿಕರಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ್ದ ಎನ್ನಲಾಗುತ್ತಿದೆ. ಸದ್ಯ ಆರೋಪಿ ಬಾಲಾಜಿಯನ್ನು ವಶಕ್ಕೆ ಪಡೆದಿರುವ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.