ಹಾವೇರಿ : ಆಶಾ ಕಾರ್ಯ ಕರ್ತೆಯೊಬ್ಬರು ಗೃಹಲಕ್ಷ್ಮಿ ಯೋಜನೆಯಿಂದ 24 ಸಾವಿರ ರೂ.ಗಳನ್ನು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ನೀಡಿ ಮಾದರಿ ಆಗಿದ್ದಾರೆ.
ಹೌದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಐರಣಿ ಗ್ರಾಮದ ಆಶಾ ಕಾರ್ಯಕರ್ತೆ ಗಂಗಮ್ಮ ಲಗುಬಿಗಿ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಿಂದ ಬಂದಂತಹ 24,000 ರೂ. ಹಣವನ್ನು ಕೂಡಿಟ್ಟು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗಾಗಿ ನೀಡಿದ್ದಾರೆ. ಗಂಗಮ್ಮಳ ಕಾರ್ಯವನ್ನು ಮೆಚ್ಚಿದ ಶಾಲೆಯ ಎಸ್‌ಡಿಎಂಸಿ ವತಿಯಿಂದ ದಂಪತಿಯನ್ನು ಸನ್ಮಾನಿಸಿ ಗೌರವಿಸಿದ್ದಾರೆ.
ಗ್ರಾಮಸ್ಥರು ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅದನ್ನು ಕಂಡು ನನಗೂ ಶಾಲೆಗೆ ದೇಣಿಗೆ ಕೊಡಬೇಕೆಂದು ಪ್ರೇರಣೆ ಬಂತು. ಹೀಗಾಗಿ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು 24 ಸಾವಿರ ರೂ.ಗಳನ್ನು ನೀಡಿದ್ದೇನೆ ಎಂದು ಗಂಗಮ್ಮ ತಿಳಿಸಿದ್ದಾರೆ.