ಬೆಂಗಳೂರು: ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಯುವ ಕಾರ್ಯ ವಿಳಂಬವಾಗುತ್ತಿರುವುದಕ್ಕೆ ಕನ್ನಡ ಮತ್ತು ಸಂಸ್ಕೃತಿ ಹಾಗು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಸೋಮವಾರ ದೇವರಾಜ ಅರಸು ಭವನದಲ್ಲಿ ಒಕ್ಕಲಿಗರ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ, ವೀರಶೈವ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿದ ಸಚಿವರು, ಆರ್ಥಿಕ ವರ್ಷ ಪೂರ್ಣಗೊಳ್ಳುವಷ್ಟರಲ್ಲಿ ನಿಗದಿತ ಗುರಿ ಮುಟ್ಟದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ
ಎಚ್ಚರಿಕೆ ನೀಡಿದರು.
ದೇವರಾಜ ಅರಸು ಅಭಿವೃದ್ಧಿ ನಿಗಮದಲ್ಲಿ ಶೇಕಡ 85ರಷ್ಟು ಹಣ ಖರ್ಚು ಮಾಡಲಾಗಿದ್ದು, ಉಳಿದ ಕೊಳವೆಬಾವಿ ಕೊರೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇನ್ನು ಒಂದು ತಿಂಗಳಲ್ಲಿ ಬಾಕಿ ಕೊಳವೆ ಬಾವಿ, ಸ್ವಾವಲಂಬಿ ಸಾರಥಿ, ಅರಿವು ಶೈಕ್ಷಣಿಕ ಸಾಲ ಹಾಗೂ ಸ್ವಯಂ ಉದ್ಯೋಗ ಸಾಲ ಯೋಜನೆಗಳನ್ನ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ನಿರ್ದೇಶನ ನೀಡಿದರು.