ನವದೆಹಲಿ:ಭಾರತದಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿರುವ ಕುಖ್ಯಾತ ಗ್ಯಾಂಗ್ ಸ್ಟರ್ ಜೋಗಿಂದರ್ ಗ್ಯಾಂಗ್ ನನ್ನು ಫಿಲಿಪೈನ್ಸ್ ನ ಮನಿಲಾದಿಂದ ಭಾರತಕ್ಕೆ ಯಶಸ್ವಿಯಾಗಿ ಗಡೀಪಾರು ಮಾಡಲಾಗಿದೆ. ವಾಂಟೆಡ್ ಭೂಗತ ಪಾತಕಿ ಜೋಗಿಂದರ್ 2017 ರಲ್ಲಿ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಾಗ ಪರಾರಿಯಾಗಿದ್ದ.
ಅವನು ಹರಿಯಾಣದ ಕೈತಾಲ್ ಜಿಲ್ಲೆಯ ಗ್ಯಾಂಗ್ ಗ್ರಾಮದವನು. ಜೋಗಿಂದರ್ ಕೊಲೆ, ಸುಲಿಗೆ ಮತ್ತು ದರೋಡೆ ಸೇರಿದಂತೆ ಗಂಭೀರ ಅಪರಾಧಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಅಪರಾಧಿ.
ಜೋಗಿಂದರ್ ಗ್ಯಾಂಗ್ ಯಾರು?
ಜೋಗಿಂದರ್ ಹೆಚ್ಚಾಗಿ ದೆಹಲಿ, ಹರಿಯಾಣ ಮತ್ತು ಪಂಜಾಬ್ನಿಂದ ಕಾರ್ಯನಿರ್ವಹಿಸುತ್ತಿರುವ ಕ್ರಿಮಿನಲ್ ಸಿಂಡಿಕೇಟ್ ನೇತೃತ್ವ ವಹಿಸಿದ್ದಾನೆ. ಭಯೋತ್ಪಾದನೆ / ಖಲಿಸ್ತಾನ್ ಪರ ಉಗ್ರಗಾಮಿ ಶಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ. ದೆಹಲಿ, ಹರಿಯಾಣ ಮತ್ತು ಪಂಜಾಬ್ನ ವಿವಿಧ ಜಿಲ್ಲೆಗಳಲ್ಲಿ ಅನೇಕ ಕೊಲೆಗಳು, ಕೊಲೆ ಯತ್ನ, ಅಪಹರಣ, ಸುಲಿಗೆ ಮತ್ತು ದರೋಡೆ ಸೇರಿದಂತೆ 25 ಕ್ಕೂ ಹೆಚ್ಚು ಘೋರ ಕ್ರಿಮಿನಲ್ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ. ಈತನ ವಿರುದ್ಧ 15 ಪ್ರಕರಣಗಳಿವೆ.
ಜೋಗಿಂದರ್ ಇತ್ತೀಚೆಗೆ ಕಾಂತ್ ಗುಪ್ತಾ ಎಂಬ ಹೆಸರಿನಲ್ಲಿ ನೇಪಾಳದ ಪಾಸ್ಪೋರ್ಟ್ ಪಡೆದು ಫಿಲಿಪೈನ್ಸ್ನಲ್ಲಿ ವಾಸಿಸುತ್ತಿದ್ದು, ದೆಹಲಿ, ಹರಿಯಾಣ ಮತ್ತು ಪಂಜಾಬ್ನಲ್ಲಿ ತನ್ನ ಸಿಂಡಿಕೇಟ್ ಮೂಲಕ ವಿದೇಶದಿಂದ ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿದ್ದ. ಈ ಸಂಬಂಧ ಭಾರತೀಯ ದಂಡ ಸಂಹಿತೆ ಮತ್ತು ಭಾರತೀಯ ಪಾಸ್ಪೋರ್ಟ್ ಕಾಯ್ದೆಯಡಿ ಜುಲೈ 2024 ರಲ್ಲಿ ಹರಿಯಾಣದ ಪಿಎಸ್ ಸದರ್ ಕೈಥಾಲ್ನಲ್ಲಿ ಪ್ರಕರಣ ದಾಖಲಿಸಲಾಗಿದೆ.