ನವದೆಹಲಿ: 2047ರ ವಿಕಸಿತ ಭಾರತ ಕನಸು ಸಾಕಾರಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಆಯವ್ಯಯ ಬಹುದೊಡ್ಡ ಕೊಡುಗೆ ನೀಡಲಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಬಜೆಟ್ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು; ಕೃಷಿಕರ ಬಗ್ಗೆ ಅತಿಹೆಚ್ಚು ಕಾಳಜಿ ವಹಿಸಿದ ಬಜೆಟ್ ಇದಾಗಿದೆ ಹಾಗೂ ಮಧ್ಯಮ ವರ್ಗದ ಜನರ ಬದುಕನ್ನು ಸುಲಭ, ಸರಳಗೊಳಿಸುವ ಬಜೆಟ್ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿಗಳಾದ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ರೈತಪರ ಆಲೋಚನೆಗಳಿಗೆ 2025ನೇ ಸಾಲಿನ ಬಜೆಟ್ ಕೈಗನ್ನಡಿ ಆಗಿದೆ ಎಂದಿರುವ ಅವರು; ಸಾವಯವ ಕೃಷಿಗೆ ಉತ್ತೇಜನ, ಕೃಷಿಯಲ್ಲಿ ಸುಸ್ಥಿರತೆಗೆ ಒತ್ತು, ರೈತನ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಅಗತ್ಯ ಉಪಕ್ರಮಗಳನ್ನು ಬಜೆಟ್ ನಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ರೈತರು ಸಶಕ್ತಗೊಂಡು ಉತ್ತಮ ಆದಾಯ ಗಳಿಸುವ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಮತ್ತು ಭವಿಷ್ಯದ ಸವಾಲುಗಳಿಗೆ ಭಾರತೀಯ ಕೃಷಿಯನ್ನು ಸಜ್ಜುಗೊಳಿಸುವ ಆಯವ್ಯಯ ಇದಾಗಿದೆ ಇಂದು ಕುಮಾರಸ್ವಾಮಿ ಅವರು ಪ್ರತಿಪಾದಿಸಿದ್ದಾರೆ.
ಮುಖ್ಯವಾಗಿ ಸಚಿವರು ಬಜೆಟ್ ನಲ್ಲಿರುವ ಈ ಕೆಳಗಿನ ಅಂಶಗಳ ಬಗ್ಗೆ ಒತ್ತು ನೀಡಿ ಪ್ರತಿಕ್ರಿಯಿಸಿದ್ದಾರೆ.
ಪಿಎಂ ಧನಧಾನ್ಯ ಯೋಜನೆ ಭಾರತೀಯ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆ. ದೇಶೀಯ ಕೃಷಿಗೆ ವಿಶ್ವದರ್ಜೆಯ ಮೂಲಸೌಕರ್ಯ, ಕೃಷಿ ಉತ್ಪನ್ನಗಳ ದಾಸ್ತಾನಿಗೆ ಅತ್ಯುತ್ತಮ ವ್ಯವಸ್ಥೆ, ರಫ್ತಿಗೆ ಉತ್ತೇಜನ, ರೈತರಿಗೆ ಹೆಚ್ಚು ಆದಾಯ ಮತ್ತು ಗ್ರಾಮ ಭಾರತಕ್ಕೆ ಬಲ ನೀಡಲಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ₹3ರಿಂದ ₹5 ಲಕ್ಷಕ್ಕೆ ಹೆಚ್ಚಳದಿಂದ ಹೈನುಗಾರರು, ಮೀನುಗಾರರು ಸೇರಿ ಎಲ್ಲಾ ಕೃಷಿಕರಿಗೆ ಸುಲಭ ಸಾಲ ದೊರೆಯಲಿದೆ.
ಕೃಷಿ ತಂತ್ರಜ್ಞಾನ ಹಾಗೂ ಕೃಷಿ ಆಧಾರಿತ ಸ್ಟಾರ್ ಟಪ್ ಗಳ ಉತ್ತೇಜನಕ್ಕೆ ₹1 ಲಕ್ಷ ಕೋಟಿ ಮೀಸಲು ಇಟ್ಟಿರುವುದು ಸ್ವಾಗತಾರ್ಹ. ಕೃತಕ ಬುದ್ಧಿಮತ್ತೆ ಬಳಕೆ ಹಾಗೂ ಅತ್ಯಾಧುನಿಕ ನೀರಾವರಿ ಸೌಲಭ್ಯಕ್ಕೆ ಆದ್ಯತೆ ಕೊಡಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಕೃಷಿ ಮೂಲಸೌಕರ್ಯಗಳನ್ನು ಉತ್ತಮಪಡಿಸಲು ಕ್ರಮ ವಹಿಸಲಾಗಿದೆ. ಅತ್ಯುತ್ತಮ ಶೀತಲೀಕರಣ ಕೇಂದ್ರಗಳ ಸ್ಥಾಪನೆ, ಸುಲಭ-ಪರಿಣಾಮಕಾರಿ ಸಂಪರ್ಕ ವ್ಯವಸ್ಥೆ, ಅತ್ಯುತ್ತಮ ಪೂರೈಕೆ ಸರಪಳಿಗೆ ಆದ್ಯತೆ ನೀಡಲಾಗಿದೆ.
ಪಿಎಂ ಫಸಲ್ ಭೀಮಾ ಯೋಜನೆ ವ್ಯಾಪ್ತಿಗೆ ಇನ್ನೂ ಹೆಚ್ಚಿನ ರೈತರು ಒಳಗೊಳ್ಳಲಿದ್ದಾರೆ. ಫಸಲು ನಷ್ಟ ಉಂಟಾದ ಸಂದರ್ಭದಲ್ಲಿ ಶೀಘ್ರಗತಿಯಲ್ಲಿ ವಿಮಾ ಸೌಲಭ್ಯ ಸಿಗುವಂತೆ ಮಾಡುವುದು ಹಾಗೂ ಅನ್ನದಾತನ ಸುರಕ್ಷತೆಗೆ ಅತಿಹೆಚ್ಚು ಒತ್ತು ಕೊಡುವ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.
ಸಹಜ ಹಾಗೂ ನಿಸರ್ಗಕ್ಕೆ ಪೂರಕವಾದ ಕೃಷಿಗೆ ಮನ್ನಣೆ. ಅಂತಹ ರೈತರಿಗೆ ಎಲ್ಲಾ ರೀತಿಯ ಉತ್ತೇಜನ ನೀಡುವ ಬಗ್ಗೆ ಬಜೆಟ್ ನಲ್ಲಿ ಭರವಸೆ ಕೊಡಲಾಗಿದೆ.
ಪ್ರಧಾನಿಗಳ ಕನಸು ವಿಕಸಿತ ಭಾರತ ಸಾಕಾರಕ್ಕೆ ವಿತ್ತ ಸಚಿವರು ಮಂಡಿಸಿರುವ ಆಯವ್ಯಯ ಮಹತ್ವದ ಕೊಡುಗೆ ನೀಡಲಿದೆ. ಭವಿಷ್ಯದಲ್ಲಿ ಭಾರತೀಯ ಕೃಷಿ ಕ್ಷೇತ್ರ ಮತ್ತಷ್ಟು ಸಮೃದ್ಧಿಯಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಉತ್ತೇಜನ:
ಸಚಿವ ಕುಮಾರಸ್ವಾಮಿ ಅವರು, ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಆಯವ್ಯಯದಲ್ಲಿ ಕೊಡಲಾಗಿರುವ ಉತ್ತೇಜನಾ ಕ್ರಮಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಮುಖ್ಯವಾಗಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ವಾಹನಗಳ ಉತ್ಪಾದನೆ ಹೆಚ್ಚಿಸುವುದು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯ ವೃದ್ಧಿಯ ಬಗ್ಗೆ ಮುಂಗಡ ಪತ್ರದಲ್ಲಿ ಒತ್ತು ಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲಕ್ಕಾಗಿ 1.5 ಲಕ್ಷ ಕೋಟಿ ರೂ. ಮೀಸಲು ಇರಿಸಿರುವುದು ರಾಜ್ಯಗಳ ಆರ್ಥಿಕ ಶಕ್ತಿಗೆ ಬಲ ತುಂಬಲು ಕೈಗೊಂಡ ಮಹತ್ವದ ಕ್ರಮವಾಗಿದೆ.
ವೇತನದಾರರಿಗೆ ಬಜೆಟ್ ನಲ್ಲಿ ಶುಭ ಸುದ್ದಿಯನ್ನೇ ಕೊಡಲಾಗಿದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ₹12 ಲಕ್ಷಕ್ಕೆ ಏರಿಸಲಾಗಿದೆ. ಮಾಸಿಕ ಸಂಬಳ ಪಡೆಯುವ ಕೋಟ್ಯಂತರ ಜನರಿಗೆ ಈ ನಿರ್ಧಾರ ಬಹಳಷ್ಟು ಅನುಕೂಲ ಉಂಟು ಮಾಡಲಿದೆ ಎಂದು ಸಚಿವರು ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿ ಗುರುತರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಸ್ಟಮ್ ಸುಂಕದಿಂದ ಕ್ಯಾನ್ಸರ್, ಹೃದ್ರೋಗ ಸೇರಿದಂತೆ ವಿವಿಧ ಕಾಯಿಲೆಗಳ 36 ಜೀವರಕ್ಷಕ ಔಷಧಿಗಳಿಗೆ ವಿನಾಯಿತಿ ಕೊಡಲಾಗಿದೆ. ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಇದರಿಂದ ಕ್ಯಾನ್ಸರ್ ರೋಗಿಗಳಿಗೆ ನಗರಗಳಿಗೆ ಅಲೆಯುವ ಅಗತ್ಯವಿರುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.
ಮೇಕ್ ಇನ್ ಇಂಡಿಯಾ ಬ್ರ್ಯಾಂಡ್ ಮೂಲಕ ಆಟಿಕೆಗಳ ವಲಯಕ್ಕಾಗಿ, ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದರು.
ರಾಜ್ಯ ಸರ್ಕಾರದಿಂದ ಪೊಲೀಸರಿಗೆ ಹೆಚ್ಚಿನ ಸವಲತ್ತು: ಗೃಹ ಸಚಿವ ಡಾ.ಜಿ.ಪರಮೇಶ್ವರ ಭರವಸೆ
ಕೇಂದ್ರ ಬಜೆಟ್ 2025: ಹೊಸ ಆದಾಯ ತೆರಿಗೆ ಸ್ಲ್ಯಾಬ್ ಬಿಡುಗಡೆ, ಇಲ್ಲಿದೆ ಸಂಪೂರ್ಣ ಮಾಹಿತಿ | New Income Tax Slab