ಬೆಂಗಳೂರು : ರಾಜ್ಯದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ದಾರಿ ಹುಡುಕಾಟ ನಡೆಸಿರುವ ಸರ್ಕಾರದ ಮುಂದೀಗ ‘ಅತ್ಯಾಚಾರಿಗಳಿಗೆ ಆಸ್ತಿಯಲ್ಲಿ ಹಕ್ಕಿಲ್ಲ’ ಎಂಬ ಪ್ರಸ್ತಾವನೆ ಇದ್ದು, ಅಧಿಕಾರಿಗಳು ಕಾನೂನು ಸಾಧ್ಯಾಸಾಧ್ಯತೆ ಗಮನಿಸಿ ಪ್ರಸ್ತಾವನೆಗೆ ಅನುಮತಿ ನೀಡುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಈ ಒಂದು ಪ್ರಸ್ತಾವನೆಗೆ ಅನುಮತಿ ದೊರೆತರೆ ಅತ್ಯಾಚಾರವಾಗುವುದನ್ನು ತಡೆಯಬಹುದಾಗಿದೆ.
ಈ ಕುರಿತಂತೆ ಈಗಾಗಲೇ ತಜ್ಞರ ಸಮಿತಿ ಮಾಡಿರುವ ಈ ಶಿಫಾರಸನ್ನು ಪರಾಮರ್ಶೆ ಮಾಡಲು ಮುಖ್ಯಕಾರ್ಯದರ್ಶಿಗೆ ಸರ್ಕಾರ ಸೂಚಿಸಿದೆ. ತಜ್ಞರ ವರದಿಯಲ್ಲಿ ರೇಪಿಸ್ಟ್ ಗಳಿಗೆ ಆಸ್ತಿ ಹಕ್ಕು ಹಿಂಪಡೆಯುವ ಪ್ರಸ್ತಾಪ ಇದೆ. ಅಷ್ಟೇ ಅಲ್ಲದೆ, ಸರ್ಕಾರದ ಎಲ್ಲ ಸೌಲಭ್ಯಗಳನ್ನು ಹಿಂಪಡೆಯುವ ಬಗ್ಗೆ ಕ್ರಮಗಳಾಗಬೇಕೆಂದು ಉಲ್ಲೇಖವಿದೆ. ಅಂದರೆ, ಪಡಿತರ ವಿತರಣೆ, ಸ್ಕಾಲರ್ ಶಿಪ್ ಸೇರಿ ಯಾವುದೇ ಸೌಲಭ್ಯ ನೀಡದ ತೀರ್ಮಾನ ಅಗಬೇಕೆಂದು ಹೇಳಲಾಗಿದೆ.
2014ರಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಸರಣಿ ರೀತಿ ನಡೆದಾಗ ಅಂದಿನ ಸರ್ಕಾರ ಎಂ.ಸಿ.ನಾಣಯ್ಯ ನೇತೃತ್ವದಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಿತ್ತು. ಬಳಿಕ ಸಮಿತಿ ಜವಾಬ್ದಾರಿಯು ವಿಧಾನಪರಿಷತ್ ಮಾಜಿ ಸದಸ್ಯ ವಿ.ಎಸ್.ಉಗ್ರಪ್ಪ ಹೆಗಲೇರಿತ್ತು. ಬಳಿಕ ವಿಧಾನ ಪರಿಷತ್ ಸದಸ್ಯರು, ಐಎಎಸ್, ಐಪಿಎಸ್ ಅಧಿಕಾರಿಗಳನ್ನೊಳಗೊಂಡ ತಂಡ 140 ಸಭೆಗಳನ್ನು ನಡೆಸಿ, ವಿವಿಧ ಸ್ಥಳಗಳಿಗೆ ಭೇಟಿಯನ್ನೂ ಕೊಟ್ಟು, ಜನಾಭಿಪ್ರಾಯ ಸಂಗ್ರಹಿಸಿ 135 ಶಿಫಾರಸು ಮಾಡಿದೆ. ಈ ಶಿಫಾರಸನ್ನು ಜಾರಿ ಮಾಡುವ ಬಗ್ಗೆ ಪರಾಮರ್ಶೆ ನಡೆಸಿ ವರದಿ ಕೊಡಲು ಸರ್ಕಾರ ಮುಖ್ಯಕಾರ್ಯದರ್ಶಿಗೆ ಜವಾಬ್ದಾರಿ ವಹಿಸಿದೆ.
ಶಾಲಾ, ಕಾಲೇಜುಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆಯಾದರೂ ಜಾಗೃತಿ ಸಭೆ ನಡೆಸುವುದನ್ನು ಕಡ್ಡಾಯಗೊಳಿಸಬೇಕು. ಕಠಿಣ ಕಾನೂನು ಬಗ್ಗೆಯೂ ಅರಿವು ಮೂಡಿಸುವ ಕೆಲಸ ಆಗಬೇಕು. ಆಗ ಜಾಗೃತ ಸಮಾಜ ನಿರ್ಮಾಣ ಸಾಧ್ಯವಾಗಬಹುದು ಎಂದು ಸಮಿತಿ ಹೇಳಿಕೊಂಡಿದೆ. ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ತನಿಖೆ ಮತ್ತು ವಿಚಾರಣೆಯನ್ನು ಗರಿಷ್ಠ ಒಂದು ವರ್ಷದ ಒಳಗೆ ಇತ್ಯರ್ಥಕ್ಕೆ ಕಾನೂನಿನಲ್ಲಿ ತಿದ್ದುಪಡಿ ತರಬೇಕು. ಕೋರ್ಟ್‌ನಲ್ಲಿ ಶಿಕ್ಷೆಗೆ ಗುರಿಯಾದ ಅಪರಾಧಿಗಳಿಗೆ ಮತದಾನದ ಹಕ್ಕನ್ನು ಶಾಶ್ವತವಾಗಿ ರದ್ದುಮಾಡಬೇಕು. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂಬುದೂ ಸಮಿತಿಯ ಪ್ರಮುಖ ಶಿಫಾರಸುಗಳು.
ಉಳಿದಂತೆ ವಿಶೇಷ ಕೋರ್ಟ್ ಸ್ಥಾಪನೆ, ಶೀಘ್ರು ಪರಿಹಾರ ವಿತರಣೆ ವ್ಯವಸ್ಥೆ, ವಿಶೇಷ ಪೊಲೀಸ್ ಠಾಣೆ,ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ಇತ್ಯಾದಿಗಳನ್ನು ನಿಯಂತ್ರಿಸುವ ಬಗ್ಗೆ ತಜ್ಞರ ಸಮಿತಿ ವರದಿಯ ಶಿಫಾರಸು ಅನುಷ್ಠಾನ ಮಾಡಲು ಸರ್ಕಾರ ಒಂದು ಹೆಜ್ಜೆ ಇಟ್ಟಿರುವುದು ಒಳ್ಳೆಯ ಬೆಳವಣಿಗೆ. ಸಮಿತಿ 135 ಶಿಫಾರಸು ಮಾಡಿತ್ತು. ಉತ್ತಮ ಸಮಾಜಕ್ಕಾಗಿ ಅವು ಶೀಘ್ರ ಅನುಷ್ಠಾನಕ್ಕೆ ಬರಲಿ.ಶಾಲಾ ಕಾಲೇಜುಗಳಲ್ಲಿ ಭದ್ರತಾ ಸಿಬ್ಬಂದಿ, ಚಾಲಕರ ನೇಮಕ ಸಂದರ್ಭದಲ್ಲಿ ಪೊಲೀಸರ ಎನ್‌ಒಸಿ ಕಡ್ಡಾಯಗೊಳಿಸುವುದು ಸೇರಿ ವಿವಿಧ ಉಪಕ್ರಮದ ಬಗ್ಗೆ ಶಿಫಾರಸು ಮಾಡಲಾಗಿದೆ.
ಅಗತ್ಯವೇನು?
1) ರೇಪಿಸ್ಟ್ ಎಂಬ ಹಣೆಪಟ್ಟಿ ಅಂಟಿಸಿಕೊಂಡರೆ ಮನೆಯಲ್ಲೂ ಜಾಗವಿಲ್ಲದ ಸ್ಥಿತಿ ಉಂಟಾಗಲಿದೆ. ಈ ಮೂಲಕ ಕಠಿಣ ಎಚ್ಚರಿಕೆ ಇದ್ದಂತೆ.
2) ಸರ್ಕಾರದ ಸೌಲಭ್ಯಗಳು ಕಡಿತವಾಗುವ ಎಚ್ಚರಿಕೆ ಇದ್ದರೆ ತಪ್ಪು ಹೆಜ್ಜೆ ಇಡುವ ಮುನ್ನ ಭಯ ಬರಬಹುದು.
3) ಶಾಲೆಗಳಲ್ಲಿ ನಿರಂತರವಾಗಿ ಕಾನೂನು 3 ಬಗ್ಗೆ ಅರಿವು ಮೂಡಿಸುವುದರಿಂದ ತಪ್ಪು ಹಾದಿ ತುಳಿಯುವ ಸಾಧ್ಯತೆ ಕಡಿಮೆ.