ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಇದುವರೆಗೂ ಆಸ್ತಿ ತೆರಿಗೆ ಪಾವತಿಸದವರಿಗೆ ಬಿಬಿಎಂಪಿ ಬಿಗ್ ಶಾಕ್ ನೀಡಲು ಮುಂದಾಗಿದ್ದು, ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ 608 ಆಸ್ತಿ ಮಾಲೀಕರು ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ ಅವರ ಸ್ಥಿರ ಆಸ್ತಿಗಳನ್ನು ಹರಾಜಿನ ಮೂಲಕ ಮಾರಾಟ ಮಾಡಿ, ಆಸ್ತಿ ತೆರಿಗೆಗೆ ವಜಾ ಮಾಡಿಕೊಳ್ಳಲು ಮುಂದಾಗಿವೆ.
ಹೌದು ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವ ವಿಚಾರವಾಗಿ ಕಾರಣ ಕೇಳಿ ನೋಟೀಸ್, ಬೇಡಿಕೆ ನೋಟೀಸ್, ಆಸ್ತಿಗಳ ಮುಟ್ಟೊಗೋಲು, ವಸತಿಯೇತರ ಆಸ್ತಿಗಳಿಗೆ ಬೀಗಮುದ್ರೆ ಸೇರಿದಂತೆ ಇನ್ನಿತರೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಕೂಡಾ ಸಾಕಷ್ಟು ಆಸ್ತಿ ಮಾಲೀಕರು ದೀರ್ಘಕಾಲದಿಂದ ಪಾಲಿಕೆಗೆ ಆಸ್ತಿ ತೆರಿಗೆ ಪಾವತಿಸುತ್ತಿಲ್ಲ. ಈ ಸಂಬಂಧ ಆಸ್ತಿ ತೆರಿಗೆ ಬಾಕಿ ವಸೂಲಿ ಮಾಡುವ ಸಲುವಾಗಿ ಆಸ್ತಿ ತೆರಿಗೆ ಪಾವತಿಸದ ಸುಸ್ತಿದಾರರ ಸ್ಥಿರ ಆಸ್ತಿಗಳನ್ನು ತುರ್ತು ಮಾರಾಟ ಮಾಡಲು ಹರಾಜು ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ.
ಹಾಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಲಕ್ಷಕ್ಕಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮತ್ತು ಬಿಬಿಎಂಪಿಗೆ ಸುಮಾರು 390 ಕೋಟಿ ರೂ. ಬಾಕಿ ಪಾವತಿಸಬೇಕಿರುವವರು, ಈ ರೀತಿಯ ಬಲವಂತದ ವಸೂಲಾತಿ ಕ್ರಮವನ್ನು ತಪ್ಪಿಸುವ ಸಲುವಾಗಿ ಎಲ್ಲಾ ಆಸ್ತಿ ತೆರಿಗೆದಾರರು ತಕ್ಷಣವೇ ತಮ್ಮ ಆಸ್ತಿ ತೆರಿಗೆ ಬಾಕಿಗಳನ್ನು ಪಾವತಿಸಲು ವಿನಂತಿಸಲಾಗಿದೆ.ದೀರ್ಘಕಾಲದ ಆಸ್ತಿ ತೆರಿಗೆ ಬಾಕಿ ವಸೂಲಿಗಾಗಿ ಬಿಬಿಎಂಪಿಯ ಎಲ್ಲಾ 8 ವಲಯಗಳಲ್ಲಿ 608 ಆಸ್ತಿಗಳಿಂದ ಸ್ಥಿರ ಆಸ್ತಿಗಳ ಹರಾಜು ಮಾರಾಟ ಮಾಡಲಾಗುತ್ತಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು.