ಹೈದ್ರಾಬಾದ್ : ಇಂದಿನ ಜನತೆಗೆ ದುಡಿಮೆ ಬೇಕಾಗಿಲ್ಲ ಆದರೆ ದುಡಿಯದೇ ಕಷ್ಟಪಡದೆ ಹಣ ಗಳಿಸುವ ಆಸೆ ಮಾತ್ರ ತುಂಬಾ ಇದೆ. ಹಾಗಾಗಿ ಇಂತಹ ಜನರನ್ನೇ ಗಾಳವಾಗಿ ಬಳಸಿಕೊಂಡು ಕೆಲವರು ಷೇರು ಮಾರುಕಟ್ಟೆ ಹಾಗೂ ಇತರೆ ಆನ್ಲೈನ್ ಗೇಮ್ ಗಳ ಮೂಲಕ ಜನರನ್ನು ವಂಚಿಸುತ್ತಾರೆ. ಇದೀಗ ಷೇರು ಮಾರುಕಟ್ಟೆಯಲ್ಲಿ 1 ಕೋಟಿ ರೂಪಾಯಿ ನಷ್ಟವಾಗಿದ್ದಕ್ಕೆ ಕಾನ್ಸ್ಟೇಬಲ್ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ ಅಂಬರಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ವೆಂಕಟೇಶ್ ಎಂದು ತಿಳಿದುಬಂದಿದ್ದು, ಷೇರು ಮಾರುಕಟ್ಟೆಯಲ್ಲಿ 1 ಕೋಟಿ ನಷ್ಟವಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದನಪೇಟ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ್ ಅವರು ಸಾಕಷ್ಟು ದೊಡ್ಡ ಮಟ್ಟದ ನಷ್ಟ ಅನುಭವಿಸಿದ್ದರು.
ಹಾಗಾಗಿ ಹೈದರಾಬಾದ್ ನಗರದ ಅಂಬರಪೇಟ್‌ನ ದುರ್ಗಾ ನಗರದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 1 ಕೋಟಿ ರೂಪಾಯಿ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಕಳೆದುಕೊಂಡ ನಂತರ ಪೇದೆ ವೆಂಕಟೇಶ್ ಅವರು ಖಿನ್ನತೆಯಲ್ಲಿ ನರಳುತ್ತಿದ್ದರು ಎನ್ನಲಾಗಿದೆ. ವೆಂಕಟೇಶ್ ಪೋಷಕರು ದೂರು ನೀಡಿದ ಹಿನ್ನೆಲೆ ಪೊಲೀಸರು ಕೇಸ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.