ಬೆಂಗಳೂರು : ವ್ಯಕ್ತಿಯೊಬ್ಬರು 10 ಸಾವಿರಕ್ಕೆ ಕಾರು ಬುಕ್ ಮಾಡಿ ಬಳಿಕ ಕ್ಯಾನ್ಸಲ್ ಮಾಡಿದ್ದರು. ನಂತರ ಕಸ್ಟಮರ್ ಕೇರ್ ಗೆ ಕರೆ ಮಾಡಿ ಹಣ ವಾಪಸ್ ನೀಡುವಂತೆ ತಿಳಿಸಿದಾಗ ಇದೇ ವೇಳೆ ಸೈಬರ್ ವಂಚಕರು ವ್ಯಕ್ತಿಯಿಂದ ಸುಮಾರು 20 ಲಕ್ಷ ರೂಪಾಯಿ ಪಡೆದು ವಂಚನೆ ಎಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು ಬೆಂಗಳೂರಿನ ಇಂದಿರಾನಗರ ನಿವಾಸಿ ಕೆ. ಸುಮನಾ ಪ್ರಸಾದ್ ಎಂಬುವರು ವಂಚನೆಗೊಳಗಾಗಿದ್ದು,ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸುಮನಾ ಪ್ರಸಾದ್ ಅವರು ಕೆಲಸ ನಿಮಿತ್ತ ಹೊರ ಹೋಗಲು ಜ.23ರಂದು ಕಾರು ಬಾಡಿಗೆ ಪಡೆಯಲು ಗೂಗಲ್ನಲ್ಲಿ ಶೋಧ ನಡೆಸಿದ್ದರು.
ಈ ವೇಳೆ ಸ್ಪೇನಿ ಕಾರ್ ಎಂಬ ವೆಬ್ಸೈಟ್ನಲ್ಲಿ ಕಾರನ್ನ ಬುಕ್ ಮಾಡಿ ಕ್ಯೂ ಆರ್ ಕೋಡ್ ಮೂಲಕ 10 ಸಾವಿರ ರೂಪಾಯಿ ಪಾವತಿಸಿದ್ದರು. ಬಳಿಕ ಆರ್ಡರ್ ರದ್ದು ಮಾಡಿದ್ದರು. ಗೂಗಲ್ ಮುಖಾಂತರ ಕಸ್ಟಮರ್ ಕೇರ್ ನಂಬರ್ ಪಡೆದು ಹಣ ವಾಪಸ್ ನೀಡುವಂತೆ ಮನವಿ ಮಾಡಿದ್ದರು.
ಈ ವೇಳೆ ವಾಟ್ಸಪ್ ಮೂಲಕ ಶೇರ್ ದಿ ಸ್ಕ್ರೀನ್ ಲಿಂಕ್ನ್ನ ಕ್ಲಿಕ್ ಮಾಡಿ ನೀಡಲಾಗುವ ಸೂಚನೆಯನ್ನ ಪಾಲಿಸಬೇಕು ಎಂದು ಹೇಳಿದ್ದರು. ವಂಚಕರ ಅಣತಿಯಂತೆ ಸಲಹೆ-ಸೂಚನೆಯನ್ನ ಪಾಲಿಸಿದ ದೂರುದಾರರಿಗೆ ಬ್ಯಾಂಕ್ಗೆ ಸಂಬಂಧಿಸಿದ ಕಸ್ಟಮರ್ ಐಡಿಯನ್ನ ಕಳುಹಿಸಿದ್ದರು. ಐಡಿ ಶೇರ್ ಮಾಡುತ್ತಿದ್ದಂತೆ ದೂರುದಾರರ ಖಾತೆಯಲ್ಲಿದ್ದ 20 ಲಕ್ಷ ಹಣವನ್ನ ಎಗರಿಸಿದ್ದಾರೆ ಎಂದು ಕೇಸ್ ದಾಖಲಾಗಿದೆ.ಈ ಕುರಿತು ಪೂರ್ವ ಸೆನ್ ಠಾಣೆಯಲ್ಲಿ FIR ದಾಖಲಾಗಿದೆ.