ಬೆಂಗಳೂರು : ಅನಾರೋಗ್ಯದ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದ ಶಿವರಾಜ್ ಕುಮಾರ್ ಅವರು ಚಿಕಿತ್ಸೆ ಪಡೆದು ಗುಣಮುಖರಾಗಿ ಬೆಂಗಳೂರಿಗೆ ಇಂದು ವಾಪಸ್ಸಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಿನಿಮಾ ಸೆಲೆಬ್ರಿಟಿಗಳು, ಆಪ್ತರು ಶಿವಣ್ಣ ಅವರನ್ನು ಸ್ವಾಗತಿಸಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಬರುತ್ತಲೇ ಎಲ್ಲರೆಡೆ ಮುಗುಳ್ನಗುತ್ತಾ ಕೈಬೀಸಿದ ಶಿವಣ್ಣ, ತಮ್ಮ ಸ್ವಾಗತಕ್ಕೆ ಆಗಮಿಸಿದವರನ್ನು ತಬ್ಬಿ ಸಂತಸ ಪಟ್ಟರು.
ವಿಮಾನ ನಿಲ್ದಾಣದ ಬಳಿಯ ಟೋಲ್ ಗೇಟ್ನಲ್ಲಿ ಅಭಿಮಾನಿಗಳು ಶಿವಣ್ಣನಿಗೆ ಸೇಬು ಹಣ್ಣಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ಶಿವಣ್ಣ ಸಹ ಕಾರು ನಿಲ್ಲಿಸಿ ಅಭಿಮಾನಿಗಳು ಸ್ವಾಗತ ಸ್ವೀಕರಿಸಿದ್ದಾರೆ. ಸ್ವಾಗತ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿ, ಮಾನ್ಯತಾ ಟೆಕ್ ಪಾರ್ಕ್ ನ ಮನೆಗೆ ಆಗಮಿಸಿದ್ದಾರೆ.
ನಟ ಶಿವರಾಜ್ ಕುಮಾರ್ ತಮ್ಮ ನಿವಾಸನದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಚಿಕಿತ್ಸೆಗೆ ಹೋಗಬೇಕಾದರೆ ನಾನು ಎಮೋಷನಲ್ ಆಗಿದ್ದೆ ಏನೇ ಆದರೂ ಜೀವನದಲ್ಲಿ ಫೇಸ್ ಮಾಡಬೇಕು. ನನಗೆ ನಮ್ಮ ಮನೆಯಲ್ಲಿ ಎಲ್ಲರ ಸಪೋರ್ಟ್ ಇತ್ತು. ಮೊದಲು ಭಯ ಆಯಿತು ಅಲ್ಲಿಗೆ ಹೋದ ಮೇಲೆ ಧೈರ್ಯ ಬಂತು. ಈಗ ನಾನು ತುಂಬಾ ಸ್ಟ್ರಾಂಗ್ ಆಗಿದ್ದೇನೆ. ಕಿಂಗ್ ಇಸ್ ಬ್ಯಾಕ್ ಎಂದು ತಿಳಿಸಿದರು.
ತುಂಬಾ ಜನರು ನನಗೆ ಧೈರ್ಯ ತುಂಬಿದರು. ನಿಮ್ಮ ಧೈರ್ಯ ಮೆಚ್ಚಬೇಕು ಅಂತ ವೈದ್ಯರು ಹೇಳಿದ್ದರು. ಎರಡು ಮೂರು ದಿನಗಳ ಕಾಲ ಲಿಕ್ವಿಡ್ ಫುಡ್ ನಲ್ಲಿ ಇದ್ದೆ. ಜೀವನವೇ ಒಂದು ಪಾಠ. ಜೀವನದಲ್ಲಿ ಇದೆಲ್ಲಾ ತಾನಾಗಿ ಬರುತ್ತದೆ ಆದರೆ ಎಲ್ಲವನ್ನು ಎದುರಿಸಬೇಕು ನಾನು ಎಲ್ಲವನ್ನು ಧೈರ್ಯವಾಗಿ ಎದುರಿಸಿದೆ. ಮುಂದಿನ ಪ್ರಾಜೆಕ್ಟ್ ಕುರಿತು ತಯಾರಿ ಮಾಡುತ್ತೇನೆ. 131ನೇ ಸಿನಿಮಾ ಬಗ್ಗೆ ನಾನು ಪ್ಲಾನ್ ಮಾಡುತ್ತೇನೆ. ರಾಮ್ ಚರಣ್ ಅವರ ಜೊತೆ ಸಿನಿಮಾ ಮಾಡುತ್ತೇನೆ ಎಂದು ನಟ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದರು.