ಚಿತ್ರದುರ್ಗ : “ಭದ್ರಾ ಮೇಲ್ದಂಡೆ ಯೋಜನೆಗೆ ₹ 5,300 ಕೋಟಿ ಅನುದಾನ ನೀಡುವುದಾಗಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು. ಬಸವರಾಜ ಬೊಮ್ಮಾಯಿ ಅವರು ಕೂಡ ರಾಜ್ಯ ಬಜೆಟ್ ನಲ್ಲಿ ಈ ವಿಚಾರ ಸೇರಿಸಿದ್ದರು. ಆದರೆ ಇದುವರೆಗೂ ಕೇಂದ್ರ ಸರ್ಕಾರ ಒಂದೇ ಒಂದು ರೂಪಾಯಿ ನೀಡಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರುವ ವಾಣಿವಿಲಾಸ ಸಾಗರಕ್ಕೆ ಬಾಗಿನ ಸಮರ್ಪಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡಿ ಎಂದು ಮನವಿ ಮಾಡಿದ್ದೆವು. ಮಾಜಿ ಸಂಸದರಾಗಿದ್ದ ನಾರಾಯಣಸ್ವಾಮಿ ಅವರು ಪತ್ರವನ್ನು ಬರೆಸಿಕೊಂಡು ಹೋದರು. ಕೇಂದ್ರ ಸರ್ಕಾರ ಬೇರೆ ರೀತಿ ಹಣ ನೀಡುವುದಾಗಿ ಅವರು ಹೇಳಿದರು. ಅದಕ್ಕೂ ಒಪ್ಪಿಕೊಂಡೆವು. ಆದರೂ ಅನುದಾನ ಬಂದಿಲ್ಲ. ಇಡೀ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ” ಎಂದು ಹೇಳಿದರು.
“ಭದ್ರಾ ಮೇಲ್ದಂಡೆ ವಿಚಾರವಾಗಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಈಗಲೂ ನಾವು ಒತ್ತಡ ಹಾಕುತ್ತಿದ್ದೇವೆ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ನಮಗೆ ಹೆಚ್ಚು ಅನುದಾನ ಸಿಗುತ್ತಿತ್ತು” ಎಂದು ಹೇಳಿದರು.
ರಾಜ್ಯದ ಬಗ್ಗೆ ಆಸಕ್ತಿ ಇದ್ದರೆ ಸಂಸದರು ಒತ್ತಡ ಹಾಕಿ
“ಈ ರಾಜ್ಯದ ಬಗ್ಗೆ ಆಸಕ್ತಿ, ಬದ್ಧತೆ ಇದ್ದರೆ ಇಲ್ಲಿನ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು. ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಮಾಡಲು ಒತ್ತಾಯ ಮಾಡಬೇಕು. ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಪ್ರಧಾನಿ ಮೋದಿ ಅವರು ಕೊಟ್ಟ ಮಾತಿನಂತೆ ಅನುದಾನ ನೀಡಿ ಮಾತು ಉಳಿಸಿಕೊಳ್ಳಲಿ” ಎಂದು ಹೇಳಿದರು.
“ನೀರು ಯಾರಿಗೂ ಬೇಧ ಭಾವ ಮಾಡುವುದಿಲ್ಲ. ನೀರಿಗೆ ಬಣ್ಣ ಇಲ್ಲ, ರುಚಿ ಇಲ್ಲ. ಎಲ್ಲರಿಗೂ ಬೇಕಾಗುವ ಪದಾರ್ಥ ನೀರು. ನಮ್ಮ ದಿನ ಆರಂಭವಾಗುವುದೇ ನೀರಿನಿಂದ. ಅದನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕು” ಎಂದು ಹೇಳಿದರು.
“ಮೇಕೆದಾಟು ಯೋಜನೆಗೆ ಆಗ್ರಹಿಸಿ ನಮ್ಮ ನೀರು ನಮ್ಮ ಹಕ್ಕು ಹೋರಾಟ ಮಾಡಿದೆವು. ವಾಣಿವಿಲಾಸ ಸಾಗರ, ಭದ್ರಾ, ಕಳಸಾ ಬಂಡೂರಿ, ಕೃಷ್ಣ ಮೇಲ್ದಂಡೆ ಯೋಜನೆ ವಿಚಾರವಾಗಿ ನಮ್ಮ ಸರ್ಕಾರ ಬದ್ಧತೆ ಹೊಂದಿದೆ. ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕಾಲದಿಂದ ಅಣೆಕಟ್ಟು ನಿರ್ಮಿಸುವುದರಿಂದ ಹಿಡಿದು ಇತ್ತೀಚಿನ ಎತ್ತಿನ ಹೊಳೆ ಯೋಜನೆ ನಮ್ಮ ಕಾಂಗ್ರೆಸ್ ಸರ್ಕಾರದ ಸಾಧನೆ” ಎಂದು ಹೇಳಿದರು.
“ಎತ್ತಿನಹೊಳೆ ಮೂಲಕ ಕೋಲಾರಕ್ಕೆ ನೀರು ತೆಗೆದುಕೊಂಡು ಹೋಗುವುದು ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ. ಜೊತೆಗೆ ಕಾಲುವೆಗಳ ನೀರು, ಕಡೆ ಭಾಗದ ರೈತರನ್ನು ತಲುಪಬೇಕು ಎಂಬ ಉದ್ದೇಶದಿಂದ ಹೊಸ ಕಾನೂನು ಜಾರಿಗೆ ತಂದಿದ್ದೇವೆ. ರೈತರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕಾಲುವೆಗಳಿಂದ ನೀರನ್ನು ಎತ್ತುವುದು ಕಾನೂನುಬಾಹಿರ. ವೀರೇಂದ್ರ ಪಪ್ಪಿ ಅವರು ತಮ್ಮ ಕ್ಷೇತ್ರದಲ್ಲಿ 8 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಲಾಗಿದೆ. ಭದ್ರ ಮೇಲ್ದಂಡೆ ಯೋಜನೆಯಡಿ ನೀರು ತುಂಬಿಸಲು ಜಿಲ್ಲೆಯಾದ್ಯಂತ ಕಾರ್ಯಕ್ರಮ ರೂಪಿಸಲಾಗುವುದು” ಎಂದು ತಿಳಿಸಿದರು.
“ಚಿತ್ರದುರ್ಗ ಭಾಗದಿಂದ ಐದು ಜನ ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಿದ್ದೀರಿ. ಆ ಮೂಲಕ ಶಕ್ತಿ ತುಂಬಿ ರಾಜ್ಯದ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದೀರಿ. ಅದಕ್ಕಾಗಿ ಧನ್ಯವಾದಗಳು. ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡುವ ಸಂದರ್ಭದಲ್ಲಿ ನಿಮ್ಮ ಜಿಲ್ಲೆ ಕೊಟ್ಟ ಸಹಕಾರ ಬೆಂಬಲ ಅವಿಸ್ಮರಣೀಯ. ಆ ಯಾತ್ರೆ ವೇಳೆ ಮಳೆ ಬಂದಾಗ ಈ ಭಾಗದ ಜನರು ಪಟ್ಟ ಶ್ರಮ ಇತಿಹಾಸ ಪುಟ ಸೇರಿದೆ. ರಾಹುಲ್ ಗಾಂಧಿ ಅವರ ಜತೆ ನಾನು, ಸಿದ್ದರಾಮಯ್ಯ ಅವರು ಹೆಜ್ಜೆ ಹಾಕಿದ ಕಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ” ಎಂದರು.
“ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವುದರಿಂದ ಹಿಡಿದು ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನವನ್ನು ಕೊಟ್ಟ ಇತಿಹಾಸ ನಮ್ಮ ಪಕ್ಷಕ್ಕಿದೆ. ನಮ್ಮ ಪಕ್ಷ ಚುನಾವಣೆಗೂ ಮುನ್ನ ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿತ್ತು. ಈ ಯೋಜನೆಗಳನ್ನು ಜಾರಿ ಮಾಡಿ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಮಹಿಳೆಯರಿಗೆ 2 ಸಾವಿರ ಹಣ, ಉಚಿತ ಪ್ರಯಾಣ ಹೀಗೆ ಐದು ಗ್ಯಾರಂಟಿಗಳ ಮೂಲಕ ನಮ್ಮ ಸರ್ಕಾರ ರಾಜ್ಯದ ಜನರ ಕಷ್ಟ ನಿವಾರಣೆ ಮಾಡಲು ಮಹತ್ತರವಾದ ಹೆಜ್ಜೆ ಹಾಕಿದೆ” ಎಂದರು.
“ರಘುಮೂರ್ತಿ, ಗೋಪಾಲಕೃಷ್ಣ, ಶ್ರೀನಿವಾಸ್, ಸುಧಾಕರ್ ಹಾಗೂ ಗೋವಿಂದಪ್ಪನವರ ಕ್ಷೇತ್ರಗಳಲ್ಲಿ ದೊಡ್ಡ ದೊಡ್ಡ ಕಾರ್ಯಕ್ರಮ ತೆಗೆದುಕೊಳ್ಳಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಆ ಮೂಲಕ ರೈತರಿಗೆ ಹಾಗೂ ಶಾಸಕರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ಜಿಲ್ಲೆಯ ಶಾಸಕರುಗಳ ಜೊತೆಗೆ ಮಾಜಿ ಸಚಿವರಾದ ಎಚ್. ಆಂಜನೇಯ ಅವರು ಜಿಲ್ಲೆಯ ಜನತೆಯ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.