ಬೆಂಗಳೂರು : ಪ್ರೀತಿಯಲ್ಲಿ ಬಿರುಕು ಮೂಡಿದ ಹಿನ್ನೆಲೆಯಲ್ಲಿ ತಾನು ಕೊಡಿಸಿದ್ದ ಮೊಬೈಲ್ ಹಾಗೂ ದ್ವಿಚಕ್ರ ವಾಹನ ವಾಪಾಸ್ ಕೇಳಲು ಯುವತಿ ಮನೆ ಬಳಿ ತೆರಳಿದ್ದ ಮಾಜಿ ಪ್ರಿಯಕರನ ಮೇಲೆ ಮಾರಕಾಸ್ತದಿಂದ ಹಲ್ಲೆ ಮಾಡಿದ ಹಾಲಿ ಪ್ರಿಯಕರ ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನೇಪಾಳ ಮೂಲದ ಬಿಕಾಸ್ (26) ಎಂದು ತಿಳಿದುಬಂದಿದೆ.ಜ.13ರಂದು ಜಕ್ಕೂರು ಲೇಔಟ್‌ನ 10ನೇ ‘ಬಿ’ ಕ್ರಾಸ್‌ನಲ್ಲಿ ನೇಪಾಳದ ಲೋಕೇಶ್ ಗುರುಂಗ್(25) ಮೇಲೆ ಬಿಕಾಸ್ ಹಾಗೂ ಆತನ ಸಹಚರರು ಹಲ್ಲೆ ಮಾಡಿದ್ದರು.ಈ ಸಂಬಂಧ ನೀಡಿದ್ದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಸಹಚರರಿಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು
ಲೋಕೇಶ್ ನಗರದಲ್ಲಿ ಸೇಲ್ ಕೆಲಸ ಮಾಡಿ ಕೊಂಡಿದ್ದ. ನೇಪಾಳ ಮೂಲದ ಸಂಧ್ಯಾ ಪಲಲ್ಲಿ ಹಾಗೂ ಆಕೆಯ ಕುಟುಂಬವನ್ನು ನೇಪಾಳದಿಂದ ನಗರಕ್ಕೆ ಕರೆತಂದು ಬಾಡಿಗೆ ಮನೆ ಮಾಡಿ ಇರಿಸಿದ್ದ. ಲೋಕೇಶ್ ಮತ್ತು ಸಂಧ್ಯಾ ಪಲ್ಸಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಲೋಕೇಶ್ ಯುವತಿಗೆಮೊಬೈಲ್, ದ್ವಿಚಕ್ರ ವಾಹನ ಕೊಡಿಸಿದ್ದ. 8 ತಿಂಗಳ ಕಾಲ ಒಂದೇ ಮನೆಯಲ್ಲಿ ಇಬ್ಬರು ಸಹಜೀವನ ನಡೆಸಿದ್ದಾರೆ. ಡಿ.1ರಂದು ಲೋಕೇಶ್ ಮತ್ತು ಸಂಧ್ಯಾ ನಡುವೆ ಭಿನ್ನಾಭಿ ಪ್ರಾಯ ಬಂದಿದ್ದು, ಆಗ ಸಂಧ್ಯಾ ಆರೋಪಿ ಬಿಕಾಸ್ ಜತೆಗೆ ಓಡಿ ಹೋಗಿದ್ದಾಳೆ.
ಜ.13ರಂದು ಯುವತಿಯ ತಂಗಿಗೆ ಕರೆ ಮಾಡಿದ್ದ ಲೋಕೇಶ್, ‘ನಾನು ಕೊಡಿಸಿದ್ದ ಮೊಬೈಲ್ ಹಾಗೂ ದ್ವಿಚಕ್ರ ವಾಹನ’ ವಾಪಸ್ ಕೊಡುವಂತೆ ತಿಳಿಸಿದ್ದ. ಆಗ ಮನೆ ಬಳಿಗೆ ಬಂದು ಕೊಂಡೊಯ್ಯುವಂತೆ ಆಕೆ ತಿಳಿಸಿದ್ದಳು’ ಎಂದು ಪೊಲೀಸರು ಹೇಳಿದರು.ಲೋಕೇಶ್ ಮತ್ತು ಆತನ ಸ್ನೇಹಿತ ಪ್ರೇಮ್ ದಾಮಿ ಜಕ್ಕೂರಿನಲ್ಲಿ ಇರುವ ಯುವತಿ ಮನೆಗೆ ತೆರಳಿದ್ದರು. ಇಬ್ಬರೂ ಮನೆಯ ಹೊರಗೆ ಕುಳಿತಿದ್ದರು. ಆಗ, ಆರೋಪಿ ಬಿಕಾಸ್ ಹಾಗೂ ಆತನ ಸಹಚರರು ಮನೆ ಬಳಿ ತೆರಳಿ ಲೋಕೇಶ್‌ಗೆ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.