ಬೆಂಗಳೂರು : ಮೈಸೂರು ರಾಜಮನೆತನ ಮತ್ತು ರಾಜ್ಯ ಸರ್ಕಾರದ ನಡುವಿನ ಜಟಾಪಟಿ ಮತ್ತೊಂದು ಹಂತಕ್ಕೆ ತಲುಪಿದೆ. ಅರಮನೆ ಭೂಮಿಗೆ ಟಿಡಿಆರ್ ನೀಡುವ ವಿಚಾರದಲ್ಲಿ ತಿಕ್ಕಾಟ ನಡೆದಿದೆ. ಹೀಗಾಗಿ ಅರಮನೆ ಮತ್ತು ಸರ್ಕಾರದ ನಡುವಿನ ಕಾನೂನು ಸಮರ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಇಂದು ಮಧ್ಯಾಹ್ನ 3 ಗಂಟೆಗೆ ತುರ್ತು ಸಂಪುಟ ಸಭೆ ಕರೆದಿದ್ದಾರೆ.
ಇಂದು ನಡೆಯುವ ತುರ್ತು ಸಂಪುಟ ಸಭೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಕೈಬಿಡುವ ಸಾಧ್ಯತೆ ಇದೆ. ರಸ್ತೆ ಅಗಲೀಕರಣ ಮಾಡದೇ ಇರಲು ಸರ್ಕಾರ ತೀರ್ಮಾನಿಸಿದ್ದು, ಟಿಡಿಆರ್ ನೀಡಿದರೆ ಮುಂದಿನ ಭೂಸ್ವಾಧೀನ ಪ್ರಕ್ರಿಯೆಗಳಿಗೆ ಮಾನದಂಡ ಆಗುವ ಆತಂಕ ಎದುರಾಗಿದೆ. ಹೀಗಾಗಿ ಇಡೀ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಸರ್ಕಾರದ ನಿರ್ಧಾರವಾಗಿದ್ದು, ನಾಳೆಯ ತುರ್ತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಸುಪ್ರೀಂಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಲು ಸರ್ಕಾರ ತೀರ್ಮಾನ ಮಾಡಿದೆ.
1996ರಲ್ಲಿ ಅರಮನೆ ಮೈದಾನವನ್ನು ವಶಪಡಿಸಿಕೊಂಡ ಕಾಯ್ದೆ ಸಿಂಧುತ್ವವನ್ನು ಎತ್ತಿ ಹಿಡಿಯುವಂತೆ ಸುಪ್ರೀಂ ಕೋರ್ಟ್‌ಗೆ ಮತ್ತೆ ಮೇಲ್ಮನವಿ ಅರ್ಜಿ ಸಲ್ಲಿಸಲು ಇತ್ತೀಚ್ಚಿಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಮೈದಾನದಲ್ಲಿ ಒಡೆಯರ್ ಉತ್ತರಾಧಿಕಾರಿಗಳು ನಿರ್ಮಿಸಿರುವ ಎಲ್ಲ ಬಗೆಯ ಶಾಶ್ವತ ಕಟ್ಟಡಗಳ ತೆರವಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ರಾಜವಂಶಸ್ಥರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.
ಏನಿದು ವಿವಾದ ?
ಬೆಂಗಳೂರು ಅರಮನೆ (ಭೂಸ್ವಾಧಿನ ಮತ್ತು ವರ್ಗಾವಣೆ) ಅಧಿನಿಯಮ- 1996 ಎಂದು ಕರೆಯಲ್ಪಡುವ ಶಾಸನದ ಮೂಲಕ ಬೆಂಗಳೂರು ಅರಮನೆಗೆ ಸೇರಿದ ಎಲ್ಲ ಸ್ಥಿರ-ಚರ ಸ್ವತ್ತುಗಳ (ಕಾಯ್ದೆಯಲ್ಲಿ ನಿರ್ದಿಷ್ಟಪಡಿಸಲಾದ ಸ್ವತ್ತುಗಳು) ಎಲ್ಲ ಹಕ್ಕನ್ನು ರಾಜ್ಯ ಸರಕಾರದಲ್ಲಿ ವಿಹಿತಗೊಳಿಸಲಾಗಿತ್ತು. ಇದನ್ನು ರಾಜವಂಶಸ್ಥರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ರಾಜ್ಯ ಸರಕಾರದ ಕಾಯ್ದೆಯನ್ನು ಎತ್ತಿ ಹಿಡಿಯಲಾಗಿತ್ತು.
ಇದನ್ನು ಪ್ರಶ್ನಿಸಿ 1997ರಲ್ಲಿ ರಾಜವಂಶಸ್ಥರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂ ಆದೇಶಿಸಿತ್ತು. ಇದು ಮೂಲ ಅರ್ಜಿಯಾಗಿದ್ದು, ಇದು ಇತ್ಯರ್ಥವಾಗದೆ ಜಮೀನಿನ ಮಾಲಕತ್ವ ಯಾರದೆಂದು ನಿರ್ಣಯವಾಗುವುದಿಲ್ಲ. ಹೀಗಾಗಿ ಇಷ್ಟೊಂದು ಬೃಹತ್ ಮೊತ್ತದ ಟಿಡಿಆರ್ ಅನ್ನು ರಾಜವಂಶಸ್ಥರಿಗೆ ಕೊಡಲು ಬರುವುದಿಲ್ಲ ಎಂಬುದು ಸರ್ಕಾರದ ವಾದ. ಹೀಗಾಗಿ ಈ ಅರ್ಜಿ ಮೊದಲು ಇತ್ಯರ್ಥಗೊಳಿಸಬೇಕೆಂದು ಕಾನೂನು ಸಮರಕ್ಕೆ ಇತ್ತೀಚಿಗೆ ನಡೆದ ಸಂಪುಟದಲ್ಲಿ ನಿರ್ಧರಿಸಲಾಗಿತ್ತು.