ಬೆಂಗಳೂರು : ಇತ್ತೀಚಿಗೆ ಸೈಬರ್ ವಂಚಕರ ಮೋಸಕ್ಕೆ ಅದೆಷ್ಟೋ ಜನರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.ಇದೀಗ ಬೆಂಗಳೂರಲ್ಲಿ ಮತ್ತೊಂದು ಘಟನೆ ನಡೆದಿದ್ದು ಹೂಡಿಕೆ ನೆಪದಲ್ಲಿ ಲಾಭದಾಸೆ ತೋರಿಸಿ ಸೈಬರ್ ವಂಚಕರು ಹೋಟೆಲ್ ನೌಕರರೊಬ್ಬರಿಗೆ ಬರೋಬ್ಬರಿ 43.15 ಲಕ್ಷ ರು. ಹಣ ಪಡೆದು ವಂಚಿಸಿದ ಆರೋಪದಡಿ ವೈಟ್ ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೌದು ವಂಚನೆಗೆ ಒಳಗಾದಂತ ವ್ಯಕ್ತಿಯನ್ನು ಕೆ.ಆರ್.ಪುರ ಸೀಗೆಹಳ್ಳಿ ನಿವಾಸಿ ಜಯಕುಮಾರ್ (40) ಎಂದು ತಿಳಿದುಬಂದಿದೆ. ಇವರು ನೀಡಿದ ದೂರಿನ ಮೇರೆಗೆ ರಾಶಿ ಅರೋರಾ ಸೇರಿ ಇತರರ ವಿರುದ್ದ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಎಫ್ ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ?
ದೂರುದಾರ ಜಯಕುಮಾರ್ ಅವರನ್ನು ಕಳೆದ ಡಿಸೆಂಬರ್ ನಲ್ಲಿ ಅಪರಿಚಿತರು ಆಕ್ಸಿಸ್ ಸ್ಟಾಕ್ ಎಕ್ಸ್ ಚೇಂಜ್ ಗ್ರೂಪ್ ಮತ್ತು ಏಂಜೆಲ್ ಒನ್ ಎಂಬ ವಾಟ್ಸಾಪ್ ಗ್ರೂಪ್ ಗೆ ಸೇರಿಸಿದ್ದಾರೆ. ಬಳಿಕ ರಾಶಿ ಅರೋರಾ ಮತ್ತು ಪ್ರಿಯಾಂಕಾ ಸಿಂಗ್ ಎಂಬುವವರು ಕರೆ ಮಾಡಿ ಸ್ಟಾಕ್ ಮಾರ್ಕೆಟ್ ಹೂಡಿಕೆ ಬಗ್ಗೆ ಮಾತನಾಡಿದ್ದಾರೆ.
ಹೂಡಿಕೆ ಮಾಡಿದರೆ ಅಧಿಕ ಲಾಭ ಬರಲಿದೆ ಎಂದು ನಂಬಿಸಿದ್ದಾರೆ. ಇವರ ಮಾತು ನಂಬಿದ ಜಯಕುಮಾರ್, ಅಪರಿಚಿತರು ಕಳುಹಿಸಿದ ಲಿಂಕ್ ಮುಖಾಂತರ ಮೊಬೈಲ್‌ನಲ್ಲಿ ಏಂಜೆಲ್ ಒನ್, ಪ್ಲೇ ಸ್ಟೋರ್, ಏ ಡೈರೆಕ್ಟ್ ಆ್ಯಪ್ ಇನ್ಸ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಬಳಿಕ ಅಪರಿಚಿತರ ಸೂಚನೆ ಮೇರೆಗೆ ಅವರು ನೀಡಿದ ಬ್ಯಾಂಕ್ ಖಾತೆಗಳು ಹಾಗೂ ಯುಪಿಐ ಐಡಿಗೆ ವಿವಿಧ ಹಂತಗಳಲ್ಲಿ 45.65 ಲಕ್ಷ ರು. ಹಣ ವರ್ಗಾಯಿಸಿದ್ದಾರೆ.
ಬಳಿಕ ದುಷ್ಕರ್ಮಿಗಳು ಲಾಭಾಂಶವೆಂದು 2.49 ಲಕ್ಷ ರು. ಹಣ ಹಾಕಿದ್ದಾರೆ. ಉಳಿದ 43.15 ಲಕ್ಷ ರು. ಹಣ ವಾಪಾಸ್ ನೀಡುವಂತೆ ಕೇಳಿದಾಗ, ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿದರೆ, ಉಳಿಕೆ ಹಣ ವಿತ್ ಡ್ರಾ ಮಾಡಬಹುದು ಎಂದು ಹೇಳಿದ್ದಾರೆ. ಈ ವೇಳೆ ಜಯಕುಮಾ ರ್‌ಗೆ ತಾನು ಆನ್‌ಲೈನ್ ಸೈಬರ್ ವಂಚಕರ ಬಲೆಗೆ ಬಿದ್ದು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.