ಬೆಂಗಳೂರು : ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪದೇ ಪದೇ ಕಾಡ್ಗಿಚ್ಚು ಕಾಣಿಸಿಕೊಳ್ಳುವ ವಲಯ ಸೇರಿದಂತೆ ರಾಜ್ಯದ ಯಾವುದೇ ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಮತ್ತು ಅರಣ್ಯಪಡೆ ಮುಖ್ಯಸ್ಥರಿಗೆ ನೀಡಿರುವ ಸೂಚನೆಯಲ್ಲಿ, ಕಾಡ್ಗಿಚ್ಚು ನಂದಿಸಲು ಅಗ್ನಿಶಾಮಕ ಸಾಧನಗಳು ಮತ್ತು ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ನಿರ್ದೇಶಿಸಲೂ ಸೂಚಿಸಿದ್ದಾರೆ. ಹಿರಿಯ ಸಂದರ್ಭದಲ್ಲಿ ಚಾರ್ಮಾಡಿ ಘಾಟ್ ನಲ್ಲಿ ಇತ್ತೀಚಿಗೆ ಹಬ್ಬಿದ್ದ ಕಾಡ್ಗಿಚ್ಚಿನ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಚಾರ್ಮಾಡಿ ಘಾಟ್ ನ ಬಿದಿರುತಳ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದ ಅರಣ್ಯಕ್ಕೆ ಆಗಿರುವ ಹಾನಿಯ ಕುರಿತಂತೆಯೂ ಅರಣ್ಯ ಸಚಿವರು ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದಾರೆ. ಕಾಡ್ಗಿಚ್ಚಿನ ಬಗ್ಗೆ ಸಂಬಂಧಿತ ವಲಯಕ್ಕೆ ಮಾಹಿತಿ ಲಭಿಸಿದ ಎಷ್ಟು ಸಮಯದಲ್ಲಿ ಬೆಂಕಿ ನಂದಿಸಲು ಕ್ರಮ ವಹಿಸಲಾಗಿದೆ. ಯಾವ ಯಾವ ವಿಧಾನ ಬಳಸಲಾಗಿದೆ ಮತ್ತು ಎಷ್ಟು ಸಂಭಾವ್ಯ ಹಾನಿ ತಡೆಯಲಾಗಿದೆ ಎಂಬ ವಿವರವನ್ನು 7 ದಿನಗಳ ಒಳಗಾಗಿ ನೀಡುವಂತೆಯೂ ಸೂಚಿಸಿದ್ದಾರೆ.