ವಿಜಯಪುರ : ಹಣ ಪಡೆದು ಕೆಲಸಕ್ಕೆ ಬರಲು ವಿಳಂಬ ಮಾಡಿದ್ದಕ್ಕೆ ಮೂವರು ಕಾರ್ಮಿಕರ ಮೇಲೆ ಮನಸೋಇಚ್ಛೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದವರ ಪೈಕಿ ಇಟ್ಟಿಗೆ ಕಾರ್ಖಾನೆ ಮಾಲೀಕ ಖೇಮು ರಾಠೋಡ್, ವಿಶಾಲ ಜುಮನಾಳ ಹಾಗೂ ಸಚಿವ ಮಾನವರ ಅನ್ನು ಪೊಲೀಸರು ಗಾಂಧಿನಗರದ ಖೇಮು ನಿವಾಸದಲ್ಲಿ ಬಂಧಿಸಿದ್ದಾರೆ.
ಸಂಕ್ರಾಂತಿ ಹಬ್ಬಕ್ಕೆ ಹೋಗಿದ್ದವರು ಹಿಂದಿರುಗುವುದು ತಡವಾಗಿದ್ದಕ್ಕೆ ಮೂವರು ಕಾರ್ಮಿಕರ ಪಾದಗಳಿಗೆ ಕಟ್ಟಿಗೆ, ಪೈಪ್ಗಳಿಂದ ಹೊಡೆದಿದ್ದಾರೆ. ಕಾರ್ಮಿಕರ ಮೇಲೆ ಹಲ್ಲೆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಮಾನವೀಯ ಹಲ್ಲೆ ಸಂಬಂಧ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.
ಪ್ರಕರಣ ಬಗ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಹಲ್ಲೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಯಾರೇ ತಪ್ಪು ಮಾಡಿದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.