ಉತ್ತರಕನ್ನಡ : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದ ಘಟನೆ ನಡೆದಿತ್ತು. ಈ ಒಂದು ಘಟನೆ ಮಾಸುವ ಮುನ್ನವೇ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಅಮಾನವೀಯ ಘಟನೆ ನಡೆದಿದ್ದು, ಗರ್ಭ ಧರಿಸಿದ್ದ ಹಸುವಿನ ರುಂಡವನ್ನೇ ಕತ್ತರಿಸಿರುವ ದುರುಳರು ದೇಹವನ್ನು ಕೊಂಡೊಯ್ದಿರುವ ಘಟನೆ ನಡೆದಿದೆ.
ಹೌದು ಇಂತಹ ಒಂದು ಕೃತ್ಯ ಎಸಗಿ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಹಸುವನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ನಿನ್ನೆ ಮೇವಿಗಾಗಿ ಬಿಟ್ಟಿದ್ದ ಹಸು ರಾತ್ರಿಯಾದರೂ ಬಂದಿರಲಿಲ್ಲ. ಬೆಳಿಗ್ಗೆ ಹಸುವಿಗಾಗಿ ಮಾಲೀಕ ಕೃಷ್ಣ ಆಚಾರ್ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹಸುವಿನ ರಕ್ತ, ಕಾಲು, ರುಂಡ ಪತ್ತೆಯಾಗಿದೆ.
ದುಷ್ಕರ್ಮಿಗಳು ಕೇವಲ ಹಸುವಿನ ರುಂಡವನ್ನು ಮಾತ್ರ ಅಲ್ಲಿ ಬಿಟ್ಟು ದೇಹವನ್ನು ಸೇವನಿಗೆ ಎಂದು ತೆಗೆದುಕೊಂಡು ಹೋಗಿದ್ದಾರೆ ಎಂದು ಹಸುವಿನ ಮಾಲೀಕರಾದಂತಹ ಕೃಷ್ಣ ಆಚಾರಿ ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದಿದ್ದ ಘಟನೆ ನಡೆದಿತ್ತು ಬಳಿಕ ಮೈಸೂರಲ್ಲಿ ದೇವರಿಗೆ ಬಿಟ್ಟ ಕರುವಿನ ಬಾಲ ಕೊಯ್ದಿದ್ದ ಘಟನೆ ನಡೆದಿತ್ತು ಇದೀಗ ಹಸುವಿನ ರುಂಡವನ್ನೇ ಕತ್ತರಿಸಿ, ಮಾಂಸ ಸೇವನೆಗೆ ದೇಹವನ್ನು ಮಾತ್ರ ತೆಗೆದುಕೊಂಡು ಹೋಗಿರುವುದು ನಿಜಕ್ಕೂ ಬೆಚ್ಚಿ ಬೀಳಿಸಿದೆ.