ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಆಗಾಗ ಅಹಿತಕರ ಘಟನೆಗಳು ಹಾಗೂ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿರುತ್ತವೆ. ಇದೀಗ ನಮ್ಮ ಮೆಟ್ರೋ ಟ್ರ್ಯಾಕ್ ಕೆಳಬಾಗದಲ್ಲಿರುವಂತಹ ಲಕ್ಷಾಂತರ ಮೌಲ್ಯದ ಕಾಪರ್ ವಿದ್ಯುತ್ ಕೇಬಲ್ ಅನ್ನು ಕಿಡಿಗೇಡಿಗಳು ಕಳ್ಳತನ ಮಾಡಿದ್ದಾರೆ. ಆದರೆ ಮೆಟ್ರೋ ಸಿಬ್ಬಂದಿಗಳೇ ಈ ಒಂದು ಕೃತ್ಯ ಎಸಗಿದ್ದಾರೆ ಎನ್ನುವ ಶಂಕೆ ಇದೀಗ ವ್ಯಕ್ತವಾಗುತ್ತಿದೆ.
ಹೌದು ನಮ್ಮ ಮೆಟ್ರೋ ರೈಲು ಟ್ರ್ಯಾಕ್ ಕೆಳಭಾಗದ ವಿದ್ಯುತ್ ಕೇಬಲ್ ಕಳುವು ಪಿಲ್ಲರ್ 12, 13 ಮತ್ತು 14ರ ಬಳಿ ಅಳವಡಿಸಿದ್ದ ಪವರ್ ಕೇಬಲ್ ಅನ್ನು ಕಳ್ಳತನ ಮಾಡಲಾಗಿದೆ. ಪೀಣ್ಯ, ರಾಜಾಜಿನಗರ ಹಾಗೂ ಬಸವನಗುಡಿಯ ಮೆಟ್ರೋ ಮಾರ್ಗದಲ್ಲಿ ಕೇಬಲ್ ಕಳ್ಳತನ ಮಾಡಲಾಗಿದೆ.
ಉದ್ದದ ವಿದ್ಯುತ್ ಕೇಬಲ್ ಗಳನ್ನು ತುಂಡು ತುಂಡಾಗಿ ಮಾಡಿ ಕಳುವು ಮಾಡಲಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಕಾಪರ್ ವಿದ್ಯುತ್ ಕೇಬಲ್ ಇದೀಗ ಕಳ್ಳತನ ಮಾಡಲಾಗಿದೆ ಎಂದು ತಿಳಿದುಬಂದಿದೆ.ಪವರ್ ಕೇಬಲ್ ಕಳವು ಹಿಂದೆ ಮೆಟ್ರೋ ಸಿಬ್ಬಂದಿಗಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.ಈ ಬಗ್ಗೆ ಮೆಟ್ರೋ ಸಹಾಯಕ ಭದ್ರತಾ ಅಧಿಕಾರಿ ಎಸ ಬಿ ಚಂದ್ರಶೇಖರ್ ದೂರು ನೀಡಿದ್ದಾರೆ. ಮೂರು ಪ್ರತ್ಯೇಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.