ಬೆಂಗಳೂರು : ಕಳೆದ ಹಲವು ದಿನಗಳಿಂದ ಡಿಜಿಟಲ್ ಅರೆಸ್ಟ್ ಹಾಗೂ ಡಿಜಿಟಲ್ ವಂಚನೆಯ ಮೂಲಕ ಸೈಬರ್ ವಂಚಕರು ಗ್ರಾಹಕರ ಹಣ ದೋಚುತ್ತಿದ್ದರು. ಇದೀಗ ಹೊಸ ಪ್ಲಾನ್ ಮಾಡಿದ ಸೈಬರ್ ವಂಚಕರು ಬೆಂಗಳೂರಿನಲ್ಲಿ ಟೆಕ್ಕಿ ಒಬ್ಬರಿಗೆ ಮೊಬೈಲ್ ಗಿಫ್ಟ್ ನೀಡುವ ಮುಖಾಂತರ ಸುಮಾರು ಎರಡು ಕೋಟಿ ರೂಪಾಯಿಗೂ ಅಧಿಕ ವಂಚಿಸಿರುವ ಘಟನೆ ಇದೀಗ ವರದಿಯಾಗಿದೆ.
ಹೌದು ಕ್ರೆಡಿಟ್ ಕಾರ್ಡ್ ಮಂಜೂರಾಗಿದೆ ಎಂದು ನಂಬಿಸಿದ ಸೈಬರ್ ವಂಚಕರು ಮೊಬೈಲ್ ಗಿಫ್ಟ್ ಕಳುಹಿಸಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರ ಖಾತೆಯಿಂದ 2.8 ಕೋಟಿ ರೂ ದೋಚಿರುವ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ. ಖಾಸಗಿ ಬ್ಯಾಂಕ್ ಪ್ರತಿನಿಧಿಗಳ ಹೆಸರಿನಲ್ಲಿ ತಾವೇ ಮೊಬೈಲ್ ಫೋನ್ ಕಥ ಕಳುಹಿಸಿ ವಂಚಿಸಿರುವ ಖದೀಮರ ವಿರುದ್ಧ ವೈಟ್ ಫೀಲ್ಡ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚಕರ ಕುರಿತು ಸುಳಿವಿರದ ದೂರುದಾರರು, ಹೊಸ ಮೊಬೈಲ್ ಫೋನ್‌ನಲ್ಲಿ ತಾವು ಖರೀದಿಸಿದ್ದ ಹೊಸ ಸಿಮ್ ಕಾರ್ಡ್ ಹಾಕಿ ಬಳಸಲಾರಂಭಿಸಿದ್ದಾರೆ. ಆದರೆ, ಹೊಸ ಸಿಮ್ ಕಾರ್ಡ್ ಆ್ಯಕ್ಟಿವೇಟ್ ಆಗುತ್ತಿದ್ದಂತೆ ವಂಚಿಸಲು ಅಗತ್ಯ ಇರುವಂತೆ ಕ್ಲೋನಿಂಗ್ ಮತ್ತು ಆ್ಯಪ್‌ಗಳನ್ನ ಇನ್‌ಸ್ಟಾಲ್ ಮಾಡಿಟ್ಟಿದ್ದ ವಂಚಕರು, ಬ್ಯಾಂಕ್‌ನಿಂದ ಯಾವುದೇ ಸಂದೇಶ ಅಥವಾ ಮೇಲ್ ಬಾರದಂತೆ ಮೊಬೈಲ್ ಫೋನ್‌ನಲ್ಲಿ ಸೆಟ್ ಮಾಡಿಟ್ಟಿದ್ದರು.
ಒಂದು ವಾರದ ಬಳಿಕ ತಮ್ಮ ಎಫ್‌ಡಿ ಖಾತೆಯಲ್ಲಿ ಹಣ ಕಡಿತವಾಗಿರುವುದನ್ನ ಗಮನಿಸಿದ ದೂರುದಾರರು, ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಹಣ ವಂಚಕರ ಪಾಲಾಗಿರುವುದು ತಿಳಿದು ಬಂದಿದೆ.ಹಣ ಕಳೆದುಕೊಂಡಿದ್ದ ವ್ಯಕ್ತಿ ತಕ್ಷಣ ವೈಟ್ ಫೀಲ್ಡ್ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಂಚಕರು ಕಳಿಸಿದ್ದ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಇದೀಗ ಹಣ ಯಾವ ಖಾತೆಗೆ ವರ್ಗಾವಣೆಯಾಗಿದೆ ಎಂಬುದನ್ನು ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.