ಬೆಂಗಳೂರು : ಹಾಸನದ ಮಾಜಿ ಸಂಸದ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ ಇನ್ ಕ್ಯಾಮೆರಾ ವಿಚಾರಣೆ (ಮುಚ್ಚಿದ ಕೊಠಡಿಯಲ್ಲಿ) ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮ್ಮತಿ ನೀಡಿದೆ.
ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಈ ವೇಳೆ ಅರ್ಜಿಗೆ ಎಸ್ಐ ಟಿ ಎಸ್ ಪಿ ಪಿ ಅಶೋಕ್ ನಾಯಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೋಪ ಪಟ್ಟಿಯಲ್ಲಿನ ಅಂಶಗಳನ್ನು ಮುಂದಿಟ್ಟು ಅಶೋಕ್ ನಾಯಕ್ ವಾದ ಮಂಡನೆ ಮಾಡಿದರು.
ಪ್ರತಿವಾದ ಮಂಡಿಸಲು ಕಾಲಾವಕಾಶ ಕೋರಿ ಪ್ರಜ್ವಲ್ ರೇವಣ್ಣ ಪರ ವಕೀಲರು ಇದೆ ವೇಳೆ ಮನವಿ ಮಾಡಿದರು. ಫೋಟೋ ವಿಡಿಯೋ ವೀಕ್ಷಿಸಲು ಕೂಡ ಕಾಲಾವಕಾಶಕ್ಕೆ ಮನವಿ ಮಾಡಿದರು. ಕೇಸ್ ನ ವಿಚಾರಣೆ ಮುಚ್ಚಿದ ಕೊಠಡಿಯಲ್ಲಿ ನಡೆಸುವಂತೆ ಇದೆ ವೇಳೆ ಪ್ರಜ್ವಲ್ ರೇವಣ್ಣ ಪರ ವಕೀಲರು ಅರ್ಜಿ ಸಲ್ಲಿಸಿದರು.
ಅತ್ಯಾಚಾರ ಆರೋಪ ಇರುವುದರಿಂದ ಇನ್ ಕ್ಯಾಮೆರಾ ವಿಚಾರಣೆಗೆ ಮನವಿ ಮಾಡಲಾಯಿತು. ಇನ್ ಕ್ಯಾಮೆರಾ ವಿಚಾರಣೆ ನಡೆಸಲು ಕೋರ್ಟ್ ಸಮ್ಮತಿ ಸೂಚಿಸಿತು.ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ ನಡೆಸಲು ಸಮ್ಮತಿ ನೀಡಿದ ಕೋರ್ಟ್ ಪ್ರಕರಣದ ವಿಚಾರಣೆ ಜನವರಿ 23ಕ್ಕೆ ಮುಂದೂಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತು.