ಬೆಂಗಳೂರು: ರಾಜ್ಯ ಸರಕಾರವು ಗೃಹ ಸಚಿವರಿಗೆ ಮಾಹಿತಿಗಳನ್ನೇ ಕೊಡದೆ ಕತ್ತಲಲ್ಲಿ ಇಟ್ಟಿರುವುದು ಸರಿಯಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಸರಕಾರ ಗೃಹ ಮಂತ್ರಿಗಳನ್ನೇ ಮೂಲೆಗುಂಪು ಮಾಡಿದೆ ಎಂದು ಅವರ ಮಾತಿನಿಂದ ಗೊತ್ತಾಗುವುದಾಗಿ ತಿಳಿಸಿದರು. ಮಾನ್ಯ ಗೃಹ ಸಚಿವರು ಏನೇ ಕೇಳಿದರೂ ಮಾಹಿತಿ ತರಿಸಿಕೊಳ್ಳುವೆ ಎನ್ನುತ್ತಾರೆ. ಸಿ.ಟಿ.ರವಿ ಕೇಸಿನಲ್ಲೂ ಅಲ್ಲಿ ನಡೆದ ಘಟನೆಗಳ ಮಾಹಿತಿ ಇಲ್ಲ; ಏನಾಗಿದೆ ಎಂದು ಗೊತ್ತಿಲ್ಲ ಎಂದಿದ್ದರು ಎಂದು ಟೀಕಿಸಿದರು.
ಬಳಿಕ ಪೊಲೀಸರ ಕ್ರಮ ಸರಿ ಇಲ್ಲ; ಸಿ.ಟಿ.ರವಿ ಅವರನ್ನು ಕಬ್ಬಿನಗದ್ದೆಯಲ್ಲಿ ಸುತ್ತಾಡಿಸಿದರು ಮತ್ತು ಇಡೀ ರಾತ್ರಿ ಬೇರೆ ಬೇರೆ ಕಡೆ ಸುತ್ತಾಡಿಸಿದ್ದಾಗಿ ಪತ್ರಕರ್ತರು ಕೇಳಿದಾಗ, ಅದು ನನಗೆ ಗೊತ್ತಾಗಲಿಲ್ಲ; ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೇಸು ಹಾಕಿದ್ದರಿಂದ ಅದನ್ನು ನಿಭಾಯಿಸಲು ಹಾಗೆ ಮಾಡಿದ್ದಾರೆ ಎಂದಿದ್ದರು ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಅವರಿಗೆ ಬೇಕಾದ ವಿಚಾರ ಬಂದರೆ ಎಲ್ಲ ಮಾಹಿತಿಯೂ ಇರುತ್ತದೆ. ಅವಶ್ಯಕತೆ ಇಲ್ಲದ್ದರ ಮಾಹಿತಿಯೇ ಇರುವುದಿಲ್ಲ ಎಂದರು. ಶಾಸಕ ಹರಿಪ್ರಸಾದ್ ಅವರು, ಆರೆಸ್ಸೆಸ್, ಬಿಜೆಪಿಯವರು ಸಂವಿಧಾನ ವಿರೋಧಿಗಳು ಎಂದಿದ್ದಾರೆ. ಎಲ್ಲಾದರೂ ಸಂವಿಧಾನಕ್ಕೆ ವಿರುದ್ಧವಾಗಿ ಬಿಜೆಪಿ ನಡೆದುಕೊಂಡ ಒಂದೇ ಒಂದು ಘಟನೆಯನ್ನು ತಿಳಿಸಲು ಅವರಿಗೆ ಸಾಧ್ಯವೇ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಸವಾಲು ಹಾಕಿದರು.
ಏನೋ ಒಂದು ಆಪಾದನೆ ಮಾಡಬೇಕೆಂಬ ಕಾರಣಕ್ಕೆ ಅವರು ಮಾಡುತ್ತಿದ್ದಾರೆ. ನಿಜವಾಗಿಯೂ ಈ ರಾಷ್ಟ್ರದಲ್ಲಿ ಮೀಸಲಾತಿ, ಸಂವಿಧಾನದ ಪರವಾಗಿ ಇರುವುದು ಬಿಜೆಪಿ ಎಂದು ತಿಳಿಸಿದರು. ಸಂವಿಧಾನ ವಿರೋಧಿ ಕಾಂಗ್ರೆಸ್ ಎಂದು ಟೀಕಿಸಿದರು. ಹರಿಪ್ರಸಾದ್ ಅವರಿಗೆ ಸಂವಿಧಾನದ, ಮೀಸಲಾತಿ ಬಗ್ಗೆ ಕಾಳಜಿ ಇದೆ. ಆದರೆ, ಕಾಂಗ್ರೆಸ್ಸಿಗೆ ಇಲ್ಲವಲ್ಲವೇ? ಎಂದು ಕೇಳಿದರು.
ಸಂವಿಧಾನವನ್ನು ತಿದ್ದಿದ್ದು ಕಾಂಗ್ರೆಸ್; ಇಂದಿರಾ ಗಾಂಧಿಯವರು ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಸ್ಥಾನ ಉಳಿಸಿಕೊಳ್ಳುವ ಸಲುವಾಗಿ ಸಂವಿಧಾನ ತಿದ್ದಿ, ತುರ್ತು ಪರಿಸ್ಥಿತಿಯನ್ನು ಹೇರಿ, ಈ ದೇಶದಲ್ಲಿ ಸಂವಿಧಾನ 2 ವರ್ಷ ಕಾಲ ಅದರ ಚಟುವಟಿಕೆ ಇಲ್ಲದಂತೆ ನ್ಯಾಯಾಲಯಗಳಲ್ಲೂ ಮತ್ತೆಲ್ಲ ವ್ಯವಹಾರ ಸ್ತಬ್ಧ ಮಾಡಿದ ಕೀರ್ತಿ ಕಾಂಗ್ರೆಸ್ ಮತ್ತು ಇಂದಿರಾ ಗಾಂಧಿಯವರಿಗೆ ಸಲ್ಲುತ್ತದೆ ಎಂದು ಟೀಕಿಸಿದರು.
ಬ್ಯಾಂಕಿನ ದರೋಡೆಗಳು ಕೂಡ ಕಾನೂನು- ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ನಿದರ್ಶನಗಳು ಎಂದ ಅವರು, ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ಸರಕಾರಿ ಖಜಾನೆ ಲೂಟಿ ಮಾಡುತ್ತಿದೆ. ಕಾಂಗ್ರೆಸ್‍ನಿಂದ ಒಂದು ಕಡೆ ಲೂಟಿ, ಕಳ್ಳಖದೀಮರಿಂದ ಮತ್ತೊಂದು ಕಡೆ ಲೂಟಿ ಎಂಬ ಸ್ಥಿತಿ ಇದೆ ಎಂದು ಆರೋಪಿಸಿದರು.
ಸಿಎಂ ಸ್ಥಾನಕ್ಕೆ ಅರ್ಹತೆ ಇದ್ದರೂ ಆಸೆ ಇಲ್ಲ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ