ಗದಗ : ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಶೀರನಹಳ್ಳಿ, ಗಂಗಾಪೂರ ಹಾಗೂ ಕೊರ್ಲಹಳ್ಳಿ ಗ್ರಾಮಗಳ ಮುಂದೆ ಹರಿಯುತ್ತಿರುವ ತುಂಗಭದ್ರಾ ನದಿ ನೀರು ಎರಡು-ಮೂರು ದಿನಗಳಿಂದ ಗಾಢವಾದ ಹಸಿರು ಬಣ್ಣಕ್ಕೆ ತಿರುಗಿದ್ದು, ನದಿ ದಂಡೆಯ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿದೆ.
ಹೌದು ಮುಂಡರಗಿ ತಾಲೂಕು ಕೊರ್ಲಳ್ಳಿ ಬಳಿ ನದಿಯ ನೀರು ಸಂಪೂರ್ಣ ಹಸಿರಾಗಿದೆ. ಹಾಗಾಗಿ ಗದಗ ಜಿಲ್ಲೆಯಲ್ಲಿ ಆತಂಕ ಮನೆ ಮಾಡಿದೆ. ವಿಪರ್ಯಾಸ ಅಂದರೆ, ಕಳೆದ ಒಂದು ವಾರದಿಂದ ನದಿ ನೀರು ಈ ರೀತಿಯ ಬಣ್ಣಕ್ಕೆ ತಿರುಗಿದ್ದು, ಮೊದ ಮೊದಲು, ನದಿ ನೀರು ಪಾಚಿಗಟ್ಟಿರಬಹುದು ಎಂದು ಸುಮ್ಮನಾಗಿದ್ದರು. ಆದರೆ ದಿನಗಳೆದರೂ, ನೀರು ತನ್ನ ಮೊದಲಿನ ಬಣ್ಣಕ್ಕೆ ಹಿಂದಿರುಗಿಲ್ಲ.
ನದಿ ದಂಡೆಯ ಮೇಲೆ ಜಮೀನು ಹೊಂದಿರುವ ಸಾಕಷ್ಟು ರೈತರು ತುಂಗಭದ್ರಾ ನದಿ ನೀರನ್ನು ಆಶ್ರಯಿಸಿ ತಮ್ಮ ಜಮೀನಿನಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಉತ್ತಮ ಇಳುವರಿ ಪಡೆದುಕೊಳ್ಳಲು ರೈತರು ಪೈರಿಗೆ ಸಾಕಷ್ಟು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಕಳೆ ನಾಶಕ ಮೊದಲಾದವುಗಳನ್ನು ಬಳಸುತ್ತಾರೆ. ಹೀಗೆ ರಾಸಾಯನಿಕದಿಂದ ಕಲುಷಿತಗೊಂಡ ನೀರನ್ನು ರೈತರು ಕಿರು ಕಾಲುವೆಯ ಮೂಲಕ ಪುನಃ ನದಿಗೆ ಬಿಡುತ್ತಾರೆ.
ಈ ಕಾರಣದಿಂದ ನದಿ ನೀರು ಕಲುಷಿತಗೊಂಡು ಹಸಿರು ನೀರು ಬಣ್ಣಕ್ಕೆ ತಿರುಗಿರಬಹುದು. ಭತ್ತದ ಪೈರಿನ ತ್ಯಾಜ್ಯದಿಂದ ನೀರು ಹಸಿರು ಬಣ್ಣಕ್ಕೆ ತಿರುಗುವಂತಿದ್ದರೆ, ತಾಲ್ಲೂಕಿನ ನದಿ ದಂಡೆಯ ಉದ್ದಕ್ಕೂ ನೀರು ಹಸಿರು ಬಣ್ಣಕ್ಕೆ ತಿರುಗಬೇಕಿತ್ತು. ಆದರೆ ಶೀರನಹಳ್ಳಿ, ಗಂಗಾಪುರ ಹಾಗೂ ಕೊರ್ಲಹಳ್ಳಿ ಗ್ರಾಮಗಳ ಮುಂದೆ ಮಾತ್ರ ಏಕೆ ನೀರು ಹಸಿರಾಗಿದೆ ಎನ್ನುವುದು ತಿಳಿಯದಾಗಿದೆ.
ಗದಗ, ಕೊಪ್ಪಳ, ವಿಜಯನಗರ ಜಿಲ್ಲೆಯ ಸುಮಾರು 40ಕ್ಕೂ ಅಧಿಕಾರಿ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ನೀರು ಕುಡಿದು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅಂತ ಗ್ರಾಮಸ್ಥರು ಕೆಂಡಕಾರಿದ್ದಾರೆ. ಮುಂಡರಗಿ ತಾಲೂಕಿನ ಗಂಗಾಪೂರ ಬಳಿಯ ವಿಜಯನಗರ ಶುಗರ್ ಫ್ಯಾಕ್ಟರಿ ಕೆಮಿಕಲ್ ನೀರು ನದಿಗೆ ಹರಿಬಿಟ್ಟಿದ್ರಿಂದ ನದಿ ಕಲುಷಿತವಾಗಿದೆ ಅಂತ ರೈತರು, ಗ್ರಾಮಸ್ಥರು ಆರೋಪಿಸಿದ್ದಾರೆ.