ಕಲಬುರ್ಗಿ : ಇತ್ತೀಚಿಗೆ ಹಾರ್ಟ್ ಅಟ್ಯಾಕ್ ಎನ್ನುವುದು ಸಾಮಾನ್ಯವಾದ ಕಾಯಿಲೆಯಾಗಿಬಿಟ್ಟಿದೆ. ಇದೀಗ ಹೃದಯಾಘಾತದಿಂದ17 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದಲ್ಲಿ ನಡೆದಿದೆ. ಹೃದಯಾಘಾತದಿಂದ ಮೃತಪಟ್ಟಿರುವ ವಿದ್ಯಾರ್ಥಿಯನ್ನು ನಾಲವಾರ ಗ್ರಾಮದ ಕೊರೇಶ್ ಸಿದ್ದಣ್ಣ ಮದ್ರಿ (17) ಎಂದು ಗುರುತಿಸಲಾಗಿದೆ.
ಮೃತ ಸಿದ್ದಣ್ಣ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಗ್ರಾಮದಲ್ಲಿ ಸ್ನೇಹಿತರ ಜೊತೆ ಕುಳಿತಾಗ ಕೋರೇಶ್‌ಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಗೆಳೆಯನೊಬ್ಬ ಕೋರೇಶ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾನೆ. ಈ ಮಧ್ಯೆ ಬೈಕ್ ಮೇಲೆ ತೆರಳುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ. ಏಕೈಕ ಮಗನನ್ನು ಹೊಂದಿದ್ದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.