ಉತ್ತರಕನ್ನಡ : ರಾಜ್ಯದಲ್ಲಿ ಮತ್ತೊಂದು ಭೀಕರವಾದ ರಸ್ತೆ ಅಪಘಾತ ಸಂಭವಿಸಿದ್ದು ಚಲಿಸುತ್ತಿರುವ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಚರಂಡಿಗೆ ಬಿದ್ದ ಪರಿಣಾಮ ಕಾರಿನಲ್ಲಿ ಸಂಚರಿಸುತ್ತಿದ್ದ 5 ಜನರ ಪೈಕಿ ಇಬ್ಬರು ಸ್ಥಳದಲ್ಲಿ ಸಾವನಪ್ಪಿದ್ದಾರೆ. ಮೃತರನ್ನು ದಂಪತಿಗಳೆಂದು ತಿಳಿದು ಬಂದಿದ್ದು, ಈ ಒಂದು ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರಾಷ್ಟ್ರೀಯ ಹೆದ್ದಾರಿಯ 63 ರ ಬೊಳೆಯ ಜಮಗೋಡ ಬಳಿ ಭಾನುವಾರ ಸಂಜೆ ನಡೆದಿದೆ.
ಮುಂಬಯಿ ಅಂದೇರಿಯ ನಾಗೇಂದ್ರ ಸದಾಶಿವ ಭಟ್ಕಳ (72) ಹಾಗೂ ಇವರ ಪತ್ನಿ ಸುಧಾ ನಾಗೇಂದ್ರ ಭಟ್ಕಳ (65) ಮೃತ ಪಟ್ಟವರು.ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದು ನಮಿತಾ ನಿತ್ಯಾನಂದ ನಾಯಕ (56), ದೀಪ್ತಿ ವಿಶ್ವಾಸ ಪ್ರಭು (36) ಹಾಗೂ ಮಂಗಳೂರಿನ ನಿತ್ಯಾನಂದ ವಾಮನ ನಾಯಕ ಗಾಯಗೊಂಡವರು. ದೀಪ್ತಿ ವಿಶ್ವಾಸ ಪ್ರಭು ಅವರಿಗೆ ಗಂಭೀರ ಸ್ವರೂಪ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದೆ.
ನಾಗೇಂದ್ರ ಸದಾಶಿವ ಭಟ್ಕಳ ಅವರ ಕುಟುಂಬದವರು ಮಂಗಳೂರಿನಿಂದ ಅಂಕೋಲಾದ ಶ್ರೀ ಲಕ್ಷ್ಮೀನಾರಾಯಣ ಮಹಾಮಾಯ ದೇವಸ್ಥಾನಕ್ಕೆ ಶನಿ ಶಾಂತಿ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲು ಆಗಮಿಸಿ ಕಳೆದ ಮೂರು ದಿನಗಳಿಂದ ತಂಗಿದ್ದರು. ಭಾನುವಾರ ಎಲ್ಲ ಧಾರ್ಮಿಕ ಕಾರ್ಯಕ್ರಮ ಮುಗಿಸಿ ವಾಪಸ್ ಮಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ದೇವಸ್ಥಾನದಿಂದ ಹೊರಟ ಕೇವಲ 2 ಕಿಮಿ ಅಂತರದಲ್ಲಿ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ.