ಬೆಂಗಳೂರು : ನಗರದ ಚಾಮರಾಜಪೇಟೆಯಲ್ಲಿ ರಸ್ತೆಯಲ್ಲಿ ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯನ್ನು ಜನವರಿ 24 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಕಾಟನ್ ಪೇಟೆ ಪೊಲೀಸರು ಹಸುಗಳ ಕೆಚ್ಚಲು ಕೊಯ್ದ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿದ್ದು, ಬಳಿಕ ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೊಪಿಯನ್ನು ಜನವರಿ 24 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.
ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳ ಕ್ರೌರ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪ್ರತಿಪಕ್ಷ ನಾಯಕ ಆರ್.ಅಶೋಕ್ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದರು. ಈ ಬೆನ್ನಲ್ಲೇ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಾಣಿ ಹಿಂಸಾಚಾರ ತಡೆ ಕಾಯ್ದೆಯಡಿ ಕಿಡಿಗೇಡಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಇದೀಗ ಆರೋಪಿಯನ್ನು ಬಂಧಿಸಿ ಸ್ಥಳ ಮಹಜರು ನಡೆಸಲಾಗಿದೆ. ಚಾಮರಾಜಪೇಟೆಯ ವಿನಾಯಕನಗರದಲ್ಲಿ ಬೈಕ್ ನಲ್ಲಿ ಬಂದ ಕಿಡಿಗೇಡಿಗಳು ರಸ್ತೆಯಲ್ಲಿ ಮಲಗಿದ್ದ 3 ಹಸುವಿನ ಕೆಚ್ಚಲು ಕೊಯ್ದು ಎಸ್ಕೇಪ್ ಆಗಿದ್ದರು. ಗಾಯಗೊಂಡ ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.