ಮಂಡ್ಯ: ಜಿಲ್ಲೆಯ ಏಕೈಕ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಯಾದ “ಮೈಶುಗರ್” ಖಾಸಗೀಕರಣ ಮಾಡಲಾಗುತ್ತಿದೆ ಎಂದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಪಪ್ರಚಾರ ಮಾಡುತ್ತಿವೆ ಎಂದು ವಿಧಾನ ಪರಿಷತ್ ಶಾಸಕರಾದ ದಿನೇಶ ಗೂಳಿಗೌಡ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಅಪ ಪ್ರಚಾರಕ್ಕೆ ಸಾರ್ವಜನಿಕರಾಗಲೀ, ರೈತರಾಗಲೀ ಅಪ ಪ್ರಚಾರಕ್ಕೆ ಕಿವಿಗೊಡಬಾರದು. ಯಾವುದೇ ಕಾರಣಕ್ಕೂ ಇದನ್ನು ಖಾಸಗೀಕರಣ ಮಾಡುವುದಿಲ್ಲ. ನಮ್ಮ ಸರ್ಕಾರ ರೈತರ ಹಿತ ಕಾಯಲು ಬದ್ಧವಿದೆ ಎಂದು ಹೇಳಿದ್ದಾರೆ.
ಈ ಕಾರ್ಖಾನೆ ಸಂಪೂರ್ಣವಾಗಿ ನಷ್ಟದಲ್ಲಿದ್ದಿದ್ದಲ್ಲದೆ, ಮುಚ್ಚಿ ಹೋಗುವ ಹಂತದಲ್ಲಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ, ಶಾಸಕರಾದ ರವಿಕುಮಾರ್ ಗಣಿಗ ಹಾಗೂ ನಾನುಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಬಳಿ ಈ ಕಾರ್ಖಾನೆಯ ಪುನಶ್ಚೇತನಕ್ಕಾಗಿ ಮನವಿ ಮಾಡಿದ್ದೆವು. ಕಳೆದ ವರ್ಷ ಕಾರ್ಖಾನೆಗೆ 50 ಕೋಟಿ ರೂಪಾಯಿಯನ್ನು ಕಾರ್ಖಾನೆಯ ಕಾರ್ಯಗಳಿಗೆ ಬಿಡುಗಡೆ ಮಾಡಿಸಲು ಯಶಸ್ವಿಯಾಗಿದ್ದೆವು. ಪರಿಣಾಮ ಕಾರ್ಖಾನೆ ಕಳೆದ ಹಂಗಾಮಿನಲ್ಲಿ 2 ಲಕ್ಷ 5 ಸಾವಿರ ಟನ್ ಕಬ್ಬನ್ನು ಅರೆದಿತ್ತು. ಮಾತ್ರವಲ್ಲ ರೈತರಿಗೆ ಕಬ್ಬಿನ ಬಿಲ್‌ನ ಸಂಪೂರ್ಣ ಹಣ ಪಾವತಿಸಲಾಗಿತ್ತು. ಈ ಬಾರಿ ಕಾರ್ಖಾನೆಯು ಸರ್ಕಾರದ ಯಾವುದೇ ಸಹಾಯಧನವನ್ನು ಪಡೆಯದೆಯೇ ಕಬ್ಬನ್ನು ನುರಿಸಿದೆ ಎಂದು ಹೇಳಿದ್ದಾರೆ.
ಈ ವರ್ಷ 2 ಲಕ್ಷದ 1 ಸಾವಿರದ 850 ಟನ್ ಕಬ್ಬನ್ನು ಅರೆಯಲಾಗಿದೆ. ಸುಮಾರು 3400 ರಷ್ಟು ರೈತರು ಕಬ್ಬು ಪೂರೈಕೆ ಮಾಡಿದ್ದರು. ಎಲ್ಲ ರೈತರಿಗೆ ಶೇಕಡ 100 ರಷ್ಟು ಬಿಲ್ ಪಾವತಿ ಮಾಡಲಾಗಿದೆ. ಮಾತ್ರವಲ್ಲ ಕಳೆದ 20 ವರ್ಷಗಳಿಂದ ಬಾಕಿ ಇದ್ದ 52.25 ಕೋಟಿ ವಿದ್ಯುತ್ ಬಿಲ್ ಬಾಕಿಯನ್ನು ಸಹ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಉಸ್ತುವಾರಿ ಸಚಿವರಾದ ಚಲುವರಾಯಸ್ವಾಾಮಿ ನೇತೃತ್ವದ ಸರ್ಕಾರ ಮನ್ನಾ ಮಾಡಿದೆ. ಹೀಗಾಗಿ ಇದನ್ನು ಖಾಸಗೀಕರಣ ಮಾಡುವಂತಹ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಇದು ಖಂಡಿತಾ ಅಪಪ್ರಚಾರವಾಗಿದೆ. ರಾಜ್ಯದಲ್ಲಿ ಇರುವ 72 ಸಕ್ಕರೆ ಕಾರ್ಖಾನೆಗಳಲ್ಲಿ ಮೈಶುಗರ್ ಏಕೈಕ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಯಾಗಿದೆ. ಮೈಶುಗರ್ ಉಳಿವಿಗೆ ಸರ್ಕಾರ ಸಿದ್ಧವಿದೆ. ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಡಿ ಎಂದು ದಿನೇಶ್ ಗೂಳಿಗೌಡ ಹೇಳಿದ್ದಾರೆ.
ಶೀಘ್ರ ಬೆಂಗಳೂರು ದಕ್ಷಿಣ ಜಿಲ್ಲೆ ಅಸ್ತಿತ್ವಕ್ಕೆ, ನಿಮ್ಮ ಜಮೀನು ಮಾರಿಕೊಳ್ಳಬೇಡಿ: ಡಿಸಿಎಂ ಡಿ.ಕೆ. ಶಿವಕುಮಾರ್
SHOCKING : ಪೊಲೀಸ್ ಉದ್ಯೋಗ ನೇಮಕಾತಿ ಪರೀಕ್ಷೆ : `ಮುನ್ನಾಭಾಯಿ MBBS’ ಸಿನಿಮಾ ರೀತಿ ಕಾಪಿ ಮಾಡಿದ ಅಭ್ಯರ್ಥಿ.!