ಬೆಂಗಳೂರು : ರೌಡಿಶೀಟರ್ ಒಬ್ಬ ತನ್ನ ಬರ್ತಡೆಯ ವೇಳೇ ಗದ್ದಲ ನಡೆಸಿದ್ದಾನೆ. ಈ ವೇಳೆ ಕಿರಿಕಿರಿಯಿಂದ ಪಕ್ಕದ ಮನೆಯ ಮಹಿಳೆ ಒಬ್ಬರು ಗದ್ದಲ ಮಾಡಿರುವುದನ್ನು ಪ್ರಶ್ನಿಸಿದ್ದಾರೆ. ಈ ವೇಳೆ ರೌಡಿ ಶೀಟರ್ ಆಕೆ ಹಾಗೂ ಆಕೆಯ ತಮ್ಮನ ಮೇಲೆ ದಾಳಿ ಮಾಡಿ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ತಿರುಪಾಳ್ಯದಲ್ಲಿ ನಡೆದಿದೆ.
ಕಳೆದ ಶನಿವಾರ ನಡೆದ ಈ ಒಂದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರೌಡಿಶೀಟರ್ ಕರಿಯ ವಿಜಿ ಈ ಒಂದು ಕೃತ್ಯ ಎಸಗಿದ್ದಾನೆ.ಕರಿಯ ವಿಜಿ ತನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮದ್ಯ ಪಾರ್ಟಿ ಆಯೋಜಿಸಿದ್ದ. ಮದ್ಯದ ಅಮಲಿನಲ್ಲಿ ಡಿಜೆ ಗದ್ದಲವೂ ಜೋರಾಗಿತ್ತು. ಇದನ್ನು ಪಕ್ಕದ ಮನೆಯ ಮಂಜುಳಾ ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ರೌಡಿಶೀಟರ್, ಚಾಕುವಿನಿಂದ ಇರಿದಿದ್ದಾನೆ ಎಂದು ನೆರೆಮನೆಯವರು ತಿಳಿಸಿದ್ದಾರೆ.
ಘಟನೆ ನಡೆದ ಬಳಿಕ ರೌಡಿ ಶೀಟರ್ ಕರಿಯ ವಿಜಿ ಹಾಗೂ ಆತನ ಜೊತೆಗೆ ಇದ್ದಂತಹ ಉಳಿದವರು ತಲೆಮರಸಿಕೊಂಡಿದ್ದು, ಘಟನಾ ಸ್ಥಳಕ್ಕೆ ಹೆಬ್ಬಗೋಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.