ಬೆಂಗಳೂರು : ಅಧಿಕಾರ ವಹಿಸಿಕೊಂಡು ಆರು ತಿಂಗಳು ಕಳೆದರೂ ರಾಜ್ಯ ಕಾಂಗ್ರೆಸ್ ಸರ್ಕಾರ ನನಗೆ ಕಾರು ನೀಡಿಲ್ಲ ಎಂದು ಕೇಂದ್ರ ಸಚಿವ HD ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದ್ದರು. ಇದೀಗ ಈ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಕುಮಾರಸ್ವಾಮಿ ಅವರಿಗೆ ಕಾರು ಹಂಚಿಕೆ ಮಾಡಿರುವುದಾಗಿ ಹೇಳಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ ಕಾಂಗ್ರೆಸ್ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು, ರಾಜ್ಯ ಸರ್ಕಾರದ ವತಿಯಿಂದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಅವರ ಅಪೇಕ್ಷೆಯಂತೆ ಹೊಸ ಟೊಯೋಟಾ ಇನ್ನೋವಾ ಹೈಕ್ರಾಸ್ ವಾಹನ ಹಂಚಿಕೆ ಆಗಿರುತ್ತದೆ. ಮಂಡ್ಯ ಜಿಲ್ಲಾಧಿಕಾರಿಗಳು ಹೊಸ ಕಾರನ್ನು ಪಡೆಯಲು ಕೇಂದ್ರ ಸಚಿವರನ್ನು ಕೋರಿದ್ದು, ಧನುರ್ ಮಾಸದ ಕಾರಣ ನೀಡಿ ಸಂಕ್ರಾಂತಿಯ ನಂತರ ಹೊಸ ಕಾರು ಪಡೆಯುವುದಾಗಿ ತಿಳಿಸಿರುತ್ತಾರೆ ಎಂದು ತಿಳಿದುಬಂದಿದೆ.
ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ 04-11-2024ರಲ್ಲಿ ಹೆಚ್.ಡಿ.ಕುಮಾರಸ್ವಾಮಿರವರ ಹೊಸ ವಾಹನದ ಪ್ರಸ್ತಾಪಕ್ಕೆ ಅನುಗುಣವಾಗಿ ಆರ್ಥಿಕ ಇಲಾಖೆಗೆ ಪತ್ರ ಬರೆದಿತ್ತು. ಕರ್ನಾಟಕದ ಸುಮಾರು 6 ಸಂಸದರಿಗೆ ಆರ್ಥಿಕ ಮಿತಿಯೊಳಗೆ ವಾಹನಗಳನ್ನು ಖರೀದಿಸಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಅದಕ್ಕೆ ಅನುಗುಣವಾಗಿ ವಾಹನ ಖರೀದಿ ಮಾಡಿ ಹೊಸ ಕಾರು ಪಡೆಯಲು ಮಾಹಿತಿ ನೀಡಲಾಗಿರುತ್ತದೆ ಎಂದು ಸ್ಪಷ್ಟನೆ ನೀಡಿದೆ.
ಕುಮಾರಸ್ವಾಮಿ ಆರೋಪವೇನು?
ಕಳೆದ ವಾರ ರಾಜ್ಯ ಪ್ರವಾಸದ ವೇಳೆ, ರಾಜ್ಯ ಸರ್ಕಾರ ಕಾರು ಒದಗಿಸಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಅಲ್ಲದೆ, ಕೇಂದ್ರ ಸರ್ಕಾರದ ವಾಹನದಲ್ಲೇ ಮಂಡ್ಯ, ಮೈಸೂರು ಜಿಲ್ಲೆ ಪ್ರವಾಸ ಮಾಡಿದ್ದರು. ರಾಜ್ಯ ಸರ್ಕಾರ ನನಗೆ ಈವರೆಗೂ ಕಾರು ಕೊಟ್ಟಿಲ್ಲ. ಹೀಗಾಗಿ, ನಮ್ಮ ಕೇಂದ್ರ ಸರ್ಕಾರದ ವಾಹನ ಬಳಕೆ ಮಾಡುತ್ತಿದ್ದೇನೆ. ಬೃಹತ್ ಕೈಗಾರಿಕಾ ಇಲಾಖೆಯ ವಾಹನ ತರಿಸಿಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದರು.
ರಾಜ್ಯ ಸರ್ಕಾರ ನನಗೆ ಇಲ್ಲಿವರೆಗೂ ಕಾರು ಕೊಟ್ಟಿಲ್ಲ. ಹೀಗಾಗಿ, ನಮ್ಮ ಕೇಂದ್ರ ಸರ್ಕಾರದ ವಾಹನ ಬಳಕೆ ಮಾಡುತ್ತಿದ್ದೇನೆ. ಬೃಹತ್ ಕೈಗಾರಿಕಾ ಇಲಾಖೆಯ ವಾಹನ ತರಿಸಿಕೊಂಡಿದ್ದೇನೆ ಎಂದು ಹೆಚ್ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದರು.ರಾಜ್ಯ ಸರ್ಕಾರ ಹೆಚ್ ಡಿ ಕುಮಾರಸ್ವಾಮಿಯವರನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು ಆ ಬಗ್ಗೆ ನನಗೆ ಏನು ಗೊತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳಬೇಕು ಎಂದು ಹೇಳಿಕೆ ನೀಡಿದ್ದರು.