ಮೈಸೂರು : ಮುಡಾದಲ್ಲಿ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ತಮ್ಮ ಮಗಳು ಅಳಿಯನ ಹೆಸರಲ್ಲಿ ಅಕ್ರಮ ಸೈಟ್ ಖರೀದಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ ಇಂದು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ ಇದೇ ವಿಚಾರವಾಗಿ ಮೈಸೂರಿನಲ್ಲಿ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರು, ಸ್ನೇಹಮಹಿ ಕೃಷ್ಣ ಅವರಿಗೆ ಯಶಸ್ಸು ಸಿಗಲಿ ಎಂದು ತಿಳಿಸಿದರು.
ಇಂದು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ನೇಹಮಯಿ ಕೃಷ್ಣ ನಮ್ಮ ಹುಡುಗನೇ, ಒಳ್ಳೆ ಕೆಲಸ ಮಾಡುತ್ತಿದ್ದಾನೆ. ರಾಜಕಾರಣಿಗಳು ಅಧಿಕಾರಿಗಳು ತಪ್ಪು ಮಾಡಿದ್ದರೆ ಶಿಕ್ಷೆ ಆಗಬೇಕು ಅಂತ ಹೇಳುತ್ತಾನೆ. ತಪ್ಪು ಮಾಡದೆ ಇದ್ದರೂ ಕೂಡ ಎಚ್ಚರಿಕೆಯಿಂದ ಹೋಗಲಿ ಎನ್ನುವ ರೀತಿ ಕೆಲಸ ಮಾಡುತ್ತಿದ್ದಾನೆ. ಅವನಿಗೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸುತ್ತೇನೆ ಎಂದರು.
ನನ್ನ ಮಗಳು ಅನ್ನಪೂರ್ಣ ಅಳಿಯ ವಿಶ್ವೇಶ್ವರಯ್ಯ ಅವರು ನಿವೇಶನ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ನಾನು ನೋಡಿರಲಿಲ್ಲ ಈಗ ತೋರಿಸಿದ್ದಾರೆ ಯಾರು 50:50 ಅನುಪಾತದಲ್ಲಿ ಜಮೀನ್ದಾರರು ಸೈಟ್ ತೆಗೆದುಕೊಂಡಿದ್ದಾರೋ ಅವರಿಂದ ವೇಟ್ ಮನಿ ಕೊಟ್ಟು ಖರೀದಿಸಿದ್ದಾರೆ ಎಂದು ಹೇಳಿದ್ದಾರೆ. ನಾನು ಅವತ್ತು ಹೇಳಿದ್ದೆ ನಾನೇ ಇರಲಿ ಬೇರೆ ಯಾರೇ ಇರಲಿ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಸಂತೋಷ ಲೋಕಾಯುಕ್ತ ಅಧಿಕಾರಿಗಳು ಅತಿ ಶೀಘ್ರದಲ್ಲಿ ತನಿಖೆ ಮಾಡಿ ತಪ್ಪು ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ ಎಂದು ಶಾಸಕ ಜಿಟಿ ದೇವೇಗೌಡ ತಿಳಿಸಿದರು.
ದೂರಿನಲ್ಲಿ ಏನಿದೆ?
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು, ತಮ್ಮ ಪ್ರಭಾವ ಬಳಸಿಕೊಂಡು, ಟಿ.ಚೌಡಯ್ಯ ಎಂಬುವವರ ಹೆಸರಿನಲ್ಲಿ ಅಕ್ರಮವಾಗಿ 50:50 ಅನುಪಾತದಲ್ಲಿ ನಿವೇಶನಗಳನ್ನು ಮಂಜೂರು ಮಾಡಿಸಿ, 50*80 ಅಳತೆಯ ಎರಡು ನಿವೇಶನಗಳನ್ನು ತಮ್ಮ ಮಗಳು, ಅಳಿಯನ ಹೆಸರಿಗೆ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಸ್ನೇಹಮಯಿ ಕೃಷ್ಣ ಅವರು ಮೈಸೂರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಮೈಸೂರು ಲೋಕಾಯುಕ್ತಕ್ಕೆ ದೂರು ನೀಡಿರುವ ಸ್ನೇಹಮಯಿ ಕೃಷ್ಣ ಅವರು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರವರು, ತಮ್ಮ ಪ್ರಭಾವ ವನ್ನು ಬಳಸಿಕೊಂಡು, ಸರ್ಕಾರಕ್ಕೆ ಸೇರಿದ ಮತ್ತು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವ ಜಮೀನಿಗೆ ಸಂಬಂಧಿಸಿದಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿಸಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೆ.ಚೌಡಯ್ಯ ಎಂಬುವವರ ಹೆಸರಿಗೆ 50:50 ಅನುಪಾತದಲ್ಲಿ ಒಟ್ಟು ಆರು ನಿವೇಶನಗಳನ್ನು ಅಕ್ರಮವಾಗಿ ಕೊಡಿಸಿ, ಅದರಲ್ಲಿ 50+80 ಅಡಿ ಅಳತೆಯ ಎರಡು ನಿವೇಶನಗಳನ್ನು ಅವರ ಮಗಳು ಶ್ರೀಮತಿ ಡಿ.ಅನ್ನಪೂರ್ಣ ಮತ್ತು ಅಳಿಯ ಜಿ.ಎಂ.ವಿಶ್ವೇಶ್ವರಯ್ಯನವರ ಹೆಸರಿಗೆ ಪಡೆದುಕೊಂಡಿರುವ ಬಗ್ಗೆ ತನಿಖೆ ನಡೆಸಿ, ಎಲ್ಲಾ ತಪಿತಸ್ಥರನ್ನು ನಾನು ನಿಮ್ಮ ಠಾಣೆಯಲ್ಲಿ ದಾಖಲು ಮಾಡಿಸಿರುವ 11/2024 ಸಂಖ್ಯೆಯ ಪ್ರಕರಣದಲ್ಲಿ ಆರೋಪಿಗಳನ್ನಾಗಿಸಿ, ಇವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಮನವಿ ಮಾಡಿದ್ದಾರೆ.