ಚಿಕ್ಕಮಗಳೂರು : ಸದ್ಯ ರಾಜ್ಯ ರಾಜಕಾರಣದಲ್ಲಿ ಡಿನ್ನರ್ ಪಾಲಿಟಿಕ್ಸ್ ಭಾರಿ ಸದ್ದು ಮಾಡುತ್ತಿದ್ದು, ಇದರ ನಡುವೆ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಡಿಕೆ ಶಿವಕುಮಾರ್ ಅವರು ಮುಂದಿನ ಸಿಎಂ ಎಂದು ಘೋಷಣೆ ಕೂಗಿದ ಘಟನೆ ಜರುಗಿತು.
ಇಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ಪೀಠಕ್ಕೆ ಭೇಟಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಠದಲ್ಲಿ ಆಯೋಜನೆ ಮಾಡಿದಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕರ್ತರು ಮುಂದಿನ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಜೈ ಕಾಂಗ್ರೆಸ್ ಪಕ್ಷಕ್ಕೆ ಜೈ ಎಂದು ಘೋಷಣೆ ಕೂಗಿದರು.
ಇದಕ್ಕೂ ಮುನ್ನ ಮೆಣಸೆ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾರ ಬೆಂಬಲವೂ ಕೂಡ ಬೇಡ ಯಾವ ಘೋಷಣೆಯೂ ಬೇಡ. ಹೈಕಮಾಂಡ್ ಸೂಚಿಸಿದಂತೆ ನಾವು ನಡೆದುಕೊಳ್ಳುತ್ತೇವೆ. ನಮ್ಮ ಸರ್ಕಾರ ಜನರ ಪರವಾಗಿ ಕೆಲಸ ಮಾಡುತ್ತದೆ.ಪಕ್ಷಕ್ಕಾಗಿ ನಾನು ಕೆಲಸ ಮಾಡುತ್ತೇನೆ ಪ್ರತಿಫಲ ನೀಡುವುದು ದೇವರಿಗೆ ಬಿಟ್ಟಿರುವ ವಿಷಯ ಎಂದು ತಿಳಿಸಿದರು.