ಮೈಸೂರು : ಮೈಸೂರಿನ ಕೆಆರ್‌ಎಸ್ ತೆರಳುವ ರಸ್ತೆಗೆ ಪ್ರಿನ್ಸಸ್ ರಸ್ತೆ ಎಂಬುದಕ್ಕೆ ಯಾವುದೇ ದಾಖಲೆ ಇಲ್ಲ ಇದಕ್ಕೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಹೆಸರಿಡುವ ವಿಚಾರವಾಗಿ, ನಾನು ಯಾರಿಗೂ ರಸ್ತೆಗೆ ನನ್ನ ಹೆಸರಿಡಿ ಎಂದು ಹೇಳಿಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 40 ವರ್ಷದಿಂದ ರಾಜಕಾರಣದಲ್ಲಿದ್ದೇನೆ. ಯಾರಿಗೂ ನನ್ನ ಹೆಸರಡಿ ಎಂದು ಹೇಳಿಲ್ಲ. ಮೈಸೂರು ವಿವಿಯಲ್ಲಿ ಗೌರವ ಡಾಕ್ಟರೇಟ್ ಕೊಟ್ಟಾಗಲೇ ನಾನು ಬೇಡ ಅಂದೇ. ಡಾಕ್ಟರೇಟ್ ತೆಗೆದುಕೊಳ್ಳುವಷ್ಟು ನನಗೆ ಯೋಗ್ಯತೆ ಇಲ್ಲ. ಆ ರಸ್ತೆಗೆ ಬೇರೆ ಹೆಸರಿದ್ದರೆ ಬದಲಾವಣೆ ಮಾಡುವುದು ಬೇಡ. ಹೆಸರಿಡುವ ವಿಚಾರವಾಗಿ ನಾನು ಯಾರ ಜೊತೆ ಚರ್ಚೆಯನ್ನ ಮಾಡಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ಮುಖಂಡರ ವಾದವೇನು?
ಕೆಆರ್‌ಎಸ್ ರಸ್ತೆಗೆ ಪ್ರಿನ್ಸಸ್ ರಸ್ತೆ ದಾಖಲೆ ಇಲ್ಲ ಎಂದು ಕಾಂಗ್ರೆಸ್ ಮುಖಂಡರು ವಾದಿಸುತ್ತಿದ್ದಾರೆ. ಆದರೆ, ಪ್ರಿನ್ಸಸ್ ರಸ್ತೆ ಎಂದು ಹೆಸರಿರುವ ನಾಮಫಲಕ ಲಭ್ಯವಾಗಿದೆ. ಯಾದವಗಿರಿ ರೈಲ್ವೆ ಬಡಾವಣೆಯ ಮನೆಗೆ ನಾಮಫಲಕ ಅಳವಡಿಸಲಾಗಿದೆ. ಮನೆ ನೇಮ್ ಬೋರ್ಡ್ನಲ್ಲಿ ಪ್ರಿನ್ಸಸ್ ರಸ್ತೆ ಎಂದು ನಮೂದಿಸಲಾಗಿದೆ.
ದಾಖಲೆಗಳ ಪ್ರಕಾರ ಪ್ರಿನ್ಸೆಸ್ ರಸ್ತೆ ಹೆಸರಿತ್ತೇ?
ಇಷ್ಟೇ ಅಲ್ಲ ರಸ್ತೆಗೆ ಪ್ರಿನ್ಸೆಸ್ ಹೆಸರಿತ್ತು ಎಂಬುದಕ್ಕೆ ಮತ್ತೊಂದು ಮಹತ್ವದ ದಾಖಲೆ ಲಭ್ಯವಾಗಿದೆ. 1921ರಲ್ಲಿ ಪ್ರಿನ್ಸೆಸ್ ರಸ್ತೆ ಎಂದು ನಮೂದಾಗಿರುವ ನಕ್ಷೆಗೆ ನಗರಾಭಿವೃದ್ಧಿ ಟ್ರಸ್ಟ್ ಬೋರ್ಡ್ ಮೈಸೂರು ಚೇರ್ಮನ್ ಸಹಿ ಹಾಕಿದ್ದಾರೆ.ಮೈಸೂರು ಪಾಲಿಕೆ ಕಚೇರಿಗೆ ತೆರಳಿ ಆಯುಕ್ತರನ್ನು ಭೇಟಿಯಾಗಿ ಸ್ನೇಹಮಯಿ ಕೃಷ್ಣ ನೇತೃತ್ವದ ನಿಯೋಗ ಚರ್ಚೆ ನಡೆಸಿದೆ. ಪ್ರಿನ್ಸೆಸ್ ರಸ್ತೆಗೆ ದಾಖಲೆಗಳಿವೆ, ಸಿಎಂ ಹೆಸರು ಇಡೋದು ಬೇಡ. ಪ್ರಿನ್ಸೆಸ್ ರಸ್ತೆ ಅಂತಲೇ ಉಳಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದೆ. ಇದೀಗ ಸಿಎಂ ಸಿದ್ದರಾಮಯ್ಯ ಇವೆಲ್ಲದಕ್ಕೆ ತೆರೆ ಎಳೆದಿದ್ದಾರೆ.