ಬೆಂಗಳೂರು: ಕಳೆದ 2022ರ ಜೂ.6ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆ ಪ್ರಕಾರ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕಾಗಿ ಶಾಲಾ ಕಟ್ಟಡದ ಸುರಕ್ಷತೆ ಪ್ರಮಾಣ ಪತ್ರ ಮತ್ತು ನಕ್ಷೆ ಅನುಮೋದನೆ, ಅಗ್ನಿ ಸುರಕ್ಷತಾ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಹೈಕೋರ್ಟ್ ಆದೇಶ ಹೊರಡಿಸಿದೆ.
ಸರ್ಕಾರದ ಸುತ್ತೋಲೆಯನ್ನು ಪ್ರಶ್ನಿಸಿ ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಸಂಸ್ಥೆಯ ಕಾರ್ಯದರ್ಶಿ ಪ್ರಭಾಕರ ಅರಸ್ ಸೇರಿ ಹಲವು ಶಾಲೆಗಳು ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯಪೀಠ ಈ ಆದೇಶವನ್ನು ನೀಡಿದೆ. ಅಲ್ಲದೆ, ಈ ನಿಯಮಗಳನ್ನು ಸರ್ಕಾರಿ ಶಾಲೆಗಳೂ ಸಹ ಪಾಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಸುತ್ತೋಲೆಯಂತೆ ಶಾಲೆಗಳಿಗೆ ಅಂತಿಮ ಮಾನ್ಯತೆ ನೀಡುವ ಮುನ್ನವೇ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯವಾಗಿದೆ. ಅದರ ಉದ್ದೇಶ ಶಾಲಾ ಕಟ್ಟಡಗಳಲ್ಲಿ ಬಿಲ್ಡಿಂಗ್ ಬೈಲಾ ಮತ್ತು ಇತರ ನಿಯಮಗಳನ್ನು ಪಾಲನೆ ಮಾಡಬೇಕು ಎಂಬುದಾಗಿದೆ, ಇಲಾಖೆ ಹೊಸ ಷರತ್ತುಗಳೇನೂ ವಿಧಿಸಿಲ್ಲ, ಹಾಲಿ ನಿಯಮಗಳಲ್ಲಿರುವ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚನೆ ನೀಡಿದೆ. ಹಾಗಾಗಿ ಸರ್ಕಾರದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.