ಬೆಂಗಳೂರು : ಸದ್ಯಕ್ಕೆ ರಾಜ್ಯ ರಾಜಕಾರಣದಲ್ಲಿ ಡಿನ್ನರ್ ಪಾಲಿಟಿಕ್ಸ್ ಭಾರಿ ಸದ್ದು ಮಾಡುತ್ತಿದ್ದು, ಸಚಿವ ಸತೀಶ್ ಜಾರಕಿಹೊಳಿ ಔತಣ ಕೂಟ ನಡೆಸಿದ್ದೇ ತಡ, ಇತ್ತ ಅಗ್ರ ಸಚಿವ ಜಿ ಪರಮೇಶ್ವರ್ ಡಿನ್ನರ್ ಪಾರ್ಟಿ ನೀಡಲು ಮುಂದಾಗಿದ್ದರು. ಆದರೆ ಹೈಕಮಾಂಡ್ ಖಡಕ್ ಸೂಚನೆ ಮೇರೆಗೆ ಇದೀಗ ಡಿನ್ನರ್ ಪಾರ್ಟಿ ರದ್ದಾಗಿದೆ. ಆದರೆ ಇದೀಗ ಈ ಒಂದು ಸಂಪ್ರದಾಯ ಬಿಜೆಪಿಯಲ್ಲೂ ನಡೆದಿದ್ದು ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲಲ್ಲಿ ಬಿಜೆಪಿಯ ಹಲವು ಮುಖಂಡರು ಗುಟ್ಟಾಗಿ ಸಭೆ ನಡೆಸಿದ್ದಾರೆ ಎನ್ನಲಾಗಿದೆ.
ಹೌದು ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಹಾಗೂ ಡಿನ್ನರ್ ಪಾಲಿಟಿಕ್ಸ್ ಗಳು ಪ್ರಾರಂಭವಾಗಿರುವ ಬೆನ್ನಲ್ಲೇ ಬಿಜೆಪಿಯಲ್ಲೂ ಈ ಸಂಸ್ಕೃತಿ ಮುಂದುವರೆದಿದೆ. ಮಂಗಳವಾರ ರಾತ್ರಿ ಬಿಜೆಪಿಯ ಹಲವು ಮುಖಂಡರು ಖಾಸಗಿ ಹೋಟೆಲ್ ಒಂದರಲ್ಲಿ ಸಭೆ ನಡೆಸಿ ಗುಟ್ಟಾಗಿ ಚರ್ಚೆ ನಡೆಸಿದ್ದಾರೆನ್ನಲಾಗಿದೆ.
ಅಲ್ಲದೇ ಕಳೆದ ಹಲವು ತಿಂಗಳಿನಿಂದ ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇವರಿಬ್ಬರ ಬಣಗಳ ನಡುವೆ ಬಡ ಬಡಿದಾಟ ಇತ್ತು. ಇದೇ ವಿಚಾರವಾಗಿ ಬಿವೈ ವಿಜಯೇಂದ್ರ ಅವರು ಕೇಂದ್ರ ಸಚಿವ ಅಮಿತ್ ಅವರಿಗೆ ಈ ಕುರಿತು ದೂರು ನೀಡಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ನಿನ್ನೆ ಯತ್ನಾಳ್ ಅವರು ಅಮಿತ್ ಶಾ ಅವರಿಗೆ ವಿಜಯೇಂದ್ರ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ವಿಜಯೇಂದ್ರ ಅವರು ಪಕ್ಷದಲ್ಲಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿಲ್ಲ. ತಮ್ಮ ಆಪ್ತರನ್ನು, ಬೆಂಬಲಿಗರನ್ನು ಮಾತ್ರ ಜತೆಗೆ ಕರೆದೊಯ್ಯುತ್ತಾರೆ. ಪಕ್ಷದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಎಲ್ಲ ನಾಯಕರೊಂದಿಗೆ ಚರ್ಚೆ ನಡೆಸುವುದಿಲ್ಲ. ಇದು ಪಕ್ಷದ ಸಂಘಟನೆ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ.
ಮಂಗಳವಾರ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಯತ್ನಾಳ ಬಣದ ಮುಖಂಡರು ವಕ್ಫ್ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಬಳಿಕ ವಿಜಯೇಂದ್ರ ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಕುಮಾರ್ ಬಂಗಾರಪ್ಪ ಮತ್ತಿತರರು ಇದ್ದರು.