ಬೆಂಗಳೂರು : ಬಿಜೆಪಿ ಎಂಎಲ್ ಸಿ ಸಿ.ಟಿ ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರು ಪತ್ರ ಬರೆದಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ರಾಜ್ಯಪಾಲರನ್ನು ಭೇಟಿಯಾಗಿದ್ದರು. ಈ ಬೆನ್ನಲ್ಲೇ ಇದೀಗ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ರಾಜ್ಯಪಾಲರು ಪತ್ರದಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಿಎಂಗೆ ಸಲಹೆ ನೀಡಿದ್ದಾರೆ. ಹಾಗೂ ಪ್ರಕರಣಕ್ಕೆ ನೀವು ಮಧ್ಯಪ್ರವೇಶಿಸಿ ತನಿಖೆ ಕೈಗೊಳ್ಳಿ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ಡಿ.19ರಂದು ವಿಧಾನಪರಿಷತ್ ಕಲಾಪದ ಸಂದರ್ಭದಲ್ಲಿ ಎಂಎಲ್ ಸಿ ಸಿ.ಟಿ.ರವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಬಂಧ ಸಿ.ಟಿ.ರವಿ ಬಂಧನವಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಈ ನಡುವೆ ರಾಜ್ಯ ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.