ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸಲಾಗುವ ಗೆಜೆಟೆಡ್ ಪ್ರೊಬೇಷನರ್ 384 ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮರುಪರೀಕ್ಷೆಯು ಇದೇ ಡಿ.29ರಂದು ನಡೆಯಲಿದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಈ ಕೆಳಕಂಡ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿದೆ.
ಅಭ್ಯರ್ಥಿಗಳು ಕೆಪಿಎಸ್‍ಸಿಯಿಂದ ಡೌನ್‍ಲೋಡ್ ಮಾಡಿಕೊಂಡ ಮರು ಪರೀಕ್ಷೆಯ ಪ್ರವೇಶ ಪತ್ರ, ಭಾವಚಿತ್ರವಿರುವ ಮೂಲ ಗುರುತಿನ ಚೀಟಿ (ಚುನಾವಣೆ ಐಡಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪಾನ್‍ಕಾರ್ಡ್, ಪಾಸ್‍ಪೋರ್ಟ್, ಸರ್ಕಾರಿ ನೌಕರರ ಐಡಿ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಹಾಜರುಪಡಿಸಬೇಕು. ಅಭ್ಯರ್ಥಿಗಳು ಮೊಬೈಲ್, ಕ್ಯಾಲ್ಕುಕಲೇಟರ್, ಸ್ಮಾರ್ಟ್‍ವಾಚ್, ಬ್ಲೂಟೂತ್, ವೈಟ್ ಫ್ಲೂಯಿಡ್, ವೈರ್ ಲೆಸ್ ಸೆಟ್, ಪೇಪರ್, ಬುಕ್ಸ್ ಇತರೆ ಎಲೆಕ್ಟ್ರಾನಿಕ್ ಗ್ಯಾಜೆಟ್‍ಗಳನ್ನು ತರುವಂತಿಲ್ಲ. ಅಭ್ಯರ್ಥಿಗಳು ಶೂ, ಸಾಕ್ಸ್, ಸ್ವೆಟರ್ ಮತ್ತು ಜರ್ಕಿನ್, ತುಂಬು ತೋಳಿನ ಷರ್ಟ್ ಮತ್ತು ಫೇಸ್ ಮಾಸ್ಕ್ ಹಾಗೂ ಇತರೆ ವಸ್ತುಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಅಭ್ಯರ್ಥಿಗಳು ಸಾಧಾರಣ ಚಪ್ಪಲಿಯನ್ನು ಮಾತ್ರ ಧರಿಸಿ ಪರೀಕ್ಷೆಗೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಜಾಮರ್ ಅಳವಡಿಕೆ:
ಮೊಬೈಲ್ ಬ್ಲೂಟೂತ್ ಮತ್ತು ಇತರೆ ಆಧುನಿಕ ಸಂವಹನ ಉಪಕರಣಗಳನ್ನು ಬಳಸಿ ಪರೀಕ್ಷೆಯಲ್ಲಿ ಅಕ್ರಮಗಳನ್ನು ಎಸಗುವುದನ್ನು ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಅಳವಡಿಕೆ ಮಾಡಲಾಗುವುದು. ಪ್ರತಿ ಕೊಠಡಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಇದರೊಂದಿಗೆ ಫೇಸ್ ರೆಕಗ್ನೈಸೇಷನ್ ಹಾಗೂ ಬಯೋಮೆಟ್ರಿಕ್ ಹಾಜರಾತಿಯನ್ನು ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕವಾದ ಸಿಬ್ಬಂದಿ ಕೈಗೊಳ್ಳುವರು. ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವ ಅಭ್ಯರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ತಪಾಸಣೆಗೆ ಒಳಪಡಿಸಬೇಕು. ಇದಕ್ಕಾಗಿ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಫ್ರಿಸ್ಕಿಂಗ್ ತಂಡಗಳನ್ನು ರಚಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಮರು ಪರೀಕ್ಷೆ ಪ್ರವೇಶ ಪತ್ರ :
384 ಗೆಜೆಟೆಡ್ ಪೊಬೆಷನರ್ಸ್ ಹುದ್ದೆಗಳ ನೇಮಕಾತಿಗೆ ಕಳೆದ ಆ.27 ರಂದು ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಡಿ.29 ರಂದು ಮತ್ತೊಮ್ಮೆ ಮರು ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತಿದೆ. ಅಭ್ಯರ್ಥಿಗಳು ಕೆ.ಪಿ.ಎಸ್.ಸಿ ವೆಬ್ ಸೈಟ್ ಮೂಲಕ ಹೊಸದಾಗಿ ಮರು ಪರೀಕ್ಷೆ ಪ್ರವೇಶ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು. ಹೊಸ ಪ್ರವೇಶ ಪತ್ರದಲ್ಲಿ ನಮೂದಿಸಲಾಗಿರುವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಬೇಕು. ತಪ್ಪದೇ ಕೆ.ಪಿ.ಎಸ್.ಸಿ ಸೂಚಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಭ್ಯರ್ಥಿಗಳಿಗೆ ಸೂಚನೆ ನೀಡಿದ್ದಾರೆ.
ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ:
ಪರೀಕ್ಷಾ ಪಾವಿತ್ರ್ಯತೆ ಕಾಪಾಡುವ ದೃಷ್ಠಿಯಿಂದ ಡಿ.29 ರಂದು ಪರೀಕ್ಷೆ ನಡೆಯುವ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಸೆಕ್ಷನ್ 114 ವಿಧಿಸಿ ನಿಷೇಧಾಜ್ಞೆ ಜಾರಿ ಮಾಡಿ, ಆದೇಶ ಹೊರಡಿಸಲಾಗಿದೆ. ಪರೀಕ್ಷಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಜೆರಾಕ್ಸ್, ಕಂಪ್ಯೂಟರ್ ಹಾಗೂ ಇಂಟರ್‍ನೆಟ್ ಸೆಂಟರ್‍ಗಳನ್ನು ತೆರೆಯುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಪಶ್ನೆ ಪತ್ರಿಕೆ ಹಾಗೂ ಒಎಂಆರ್ ಗಳನ್ನು ಕೊಂಡೊಯ್ಯಲು ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯಿಂದ ಹೆಲ್ತ್ ಸ್ಕ್ರೀನಿಂಗ್ ಕೌಂಟರ್ ಸ್ಥಾಪಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸಭೆಯಲ್ಲಿ ಮಾಹಿತಿ ನೀಡಿದರು.