ಮಂಗಳೂರು : ಸಾಮಾನ್ಯವಾಗಿ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಯಾವುದೇ ಕೆಲಸಕ್ಕೆ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದನ್ನು ನಾವು ಕೇಳಿದ್ದೇವೆ. ಆದರೆ ಇನ್ನೊಬ್ಬ ಖದೀಮ ತಾನೇ ಲೋಕಾಯುಕ್ತ ತಾನು ಲೋಕಾಯುಕ್ತ ಅಧಿಕಾರಿ ಎಂದು ಹೇಳಿ ಪುರಸಭೆಯ ಕಂದಾಯ ಅಧಿಕಾರಿಯ ಬಳಿ ಹಣಕ್ಕೆ ಬೇಡಿಕೆ ಇಟ್ಟಂತಹ ಆರೋಪಿಯನ್ನು ಇದೀಗ ಅರೆಸ್ಟ್ ಮಾಡಿರುವ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ನಲ್ಲಗುಟ್ಲಪಲ್ಲಿ ಗ್ರಾಮದ ಧನಂಜಯ್ ರೆಡ್ಡಿ ತೋಟ ಎಂದು ತಿಳಿದುಬಂದಿದೆ. ಕಳೆದ ಏಪ್ರಿಲ್ ದಂದು ಸೋಮೇಶ್ವರ ಪುರಸಭೆ ರೆವಿನ್ಯೂ ಆಫೀಸರ್ ಪುರುಷೋತ್ತಮ ಅವರ ಮೊಬೈಲ್ಗೆ ಅಪರಿಚಿತನಿಂದ ವಾಟ್ಸ್ಆ್ಯಪ್ ಕರೆ ಬಂದಿತ್ತು. ತಾನು ಲೋಕಾಯುಕ್ತದಿಂದ ಮಾತನಾಡುತ್ತಿದ್ದೇನೆ. ತಮ್ಮ ಮೇಲೆ ಆರೋಪ ಬಂದಿದೆ. ನಮ್ಮ ಟೆಕ್ನಿಕಲ್ ಆಫೀಸರ್ ನಿಮ್ಮ ಆಫೀಸಿಗೆ ಬರುವ ಮೊದಲು ಅದನ್ನು ಸರಿ ಮಾಡುವುದಾದರೆ ಮಾಡುವ ಎಂದು, ಹಣ ನೀಡುವಂತೆ ಫೋನ್ನಲ್ಲಿ ಬೇಡಿಕೆ ಇಟ್ಟಿದ್ದನು.
ಈ ಕುರಿತು ಆರೋಪಿ ಕರೆ ಮಾಡಿರುವ ಮೊಬೈಲ್ ಸಂಖ್ಯೆಯನ್ನು ಟ್ರೂಕಾಲರ್ನಲ್ಲಿ ಪರೀಶೀಲಿಸಿದಾಗ ಡಿ. ಪ್ರಭಾಕರ ಲೋಕಾಯುಕ್ತ ಪಿಐ ಎಂದು ಬಂದಿದೆ. ಈ ಬಗ್ಗೆ ಪುರುಷೋತ್ತಮ ಅವರು ಮಂಗಳೂರಿನಲ್ಲಿರುವ ಕರ್ನಾಟಕ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿದ್ದರು. ಆಗ ಅಂತಹ ಹೆಸರಿನ ಯಾವುದೇ ಅಧಿಕಾರಿ/ಸಿಬ್ಬಂದಿ ಇರುವುದಿಲ್ಲವಾಗಿ ತಿಳಿದು ಬಂದಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.