ಬೆಂಗಳೂರು: ಡಿ.21ಕ್ಕೆ ಮುಕ್ತಾಯಗೊಂಡಿದ್ದಂತ ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ನೋಂದಾಯಿಸಿಕೊಳ್ಳಲು, ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಮತ್ತೆ ಅವಧಿಯನ್ನು ವಿಸ್ತರಿಸಲಾಗಿದೆ.
ಇಂದು ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಮಾಹಿತಿ ನೀಡಲಾಗಿದ್ದು, 2025 ನೇ ಸಾಲಿನ ಮಾರ್ಚ್ ಮಾಹೆಯಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ಪುನರಾವರ್ತಿತ ಅಭ್ಯರ್ಥಿಗಳು, ಫಲಿತಾಂಶ ಉತ್ತಮಪಡಿಸಿಕೊಳ್ಳುವ ಅಭ್ಯರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಗಳು ನೋಂದಾಯಿಸಿಕೊಳ್ಳಲು ದಿನಾಂಕ:21-12-2024 ರಿಂದ 31-12-2024 ರವರೆಗೆ “ವಿಶೇಷ ದಂಡ ಶುಲ್ಕ” ವನ್ನು ಸಂಬಂಧಿಸಿದ ಕಾಲೇಜುಗಳಲ್ಲಿ ಪಾವತಿಸಲು ಅವಕಾಶವನ್ನು ಕಲ್ಪಿಸಿದೆ ಎಂದಿದ್ದಾರೆ.
ಈಗಾಗಲೇ ಹಲವು ಬಾರಿ ವಿಸ್ತರಿಸಿರುವುದರಿಂದ ಪರೀಕ್ಷಾ ಶುಲ್ಕ ಪಾವತಿಸುವ ದಿನಾಂಕವನ್ನು ಯಾವುದೇ ಕಾರಣಕ್ಕೂ ಪುನಃ ವಿಸ್ತರಿಸಲಾಗುವುದಿಲ್ಲ. ಇದು ಅಂತಿಮ ಅವಕಾಶವಾಗಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುವಂತೆ ಪ್ರಾಂಶುಪಾಲರು ಕ್ರಮ ವಹಿಸುವುದು. ಈ ಸಂಬಂಧ ವಿದ್ಯಾರ್ಥಿಗಳು ಮಂಡಲಿಯ ಜಾಲತಾಣ https://kseab.karnataka.gov.in ರಲ್ಲಿ ಅಪ್ಲೋಡ್ ಮಾಡಲಾಗಿರುವ “ಸುತ್ತೋಲೆ” ಯಲ್ಲಿ ಹೆಚ್ಚಿನ ವಿವರಗಳನ್ನು ವೀಕ್ಷಿಸಬಹುದಾಗಿದೆ ಎಂದು ತಿಳಿಸಿದ್ದಾರೆ.