ಹುಬ್ಬಳ್ಳಿ : ಹುಬ್ಬಳ್ಳಿ ನಗರದ ನಿವೃತ್ತ ವೈದ್ಯಕೀಯ ದಾಖಲೆ ಅಧಿಕಾರಿಯೊಬ್ಬರಿಗೆ, ವಂಚಕನೊಬ್ಬ CBI ಸೋಗಿನಲ್ಲಿ ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಬೆದರಿಕೆ ಒಡ್ಡಿ ಅವರಿಂದ ಕೋಟ್ಯಾಂತರ ರೂ. ಹಣವನ್ನು ಪೀಕಿರುವ ಘಟನೆ ಹುಬ್ಬಳ್ಳಿ ನಗರದ ಕೇಶ್ವಪುರದಲ್ಲಿ ನಡೆದಿದೆ.
ಕೇಶ್ವಾಪುರ ವಿನಯ ಕಾಲೋನಿಯ ಮೋಹನರಾಜ್ ಕೋರಿಶೆಟ್ಟಿ ಎಂಬುವರೆ ಮೋಸಗೊಂಡವರು. ಇವರಿಗೆ ಡಿ.3ರಂದು ಅಪರಿಚಿತನು ವಾಟ್ಸ್ಆ್ಯಪ್ ವಿಡಿಯೋ ಕರೆ ಮಾಡಿ ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು, ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಿವೆ. ಮುಂಬೈ ಕೋರ್ಟ್‌ನಲ್ಲಿ PMLA ಕೇಸ್ ಆಗಿದೆ. ಬಂಧನ ವಾರಂಟ್ ಜಾರಿ ಮಾಡಲಾಗಿದೆ. ನಿಮ್ಮನ್ನು ಎಲ್ಲಿ ಯಾವಾಗ ಬೇಕಾದರೂ ಬಂಧಿಸಬಹುದು ಎಂದು ಭಯಪಡಿಸಿದ್ದಾರೆ.
ಅಲ್ಲದೆ, ಬಂಧನ ವಾರಂಟ್ ತಡೆಹಿಡಿಯಲು, ಕೇಸ್ ತನಿಖೆಗೊಳಪಡಿಸಲು ಹೇಳಿದ ಖಾತೆಗಳಿಗೆ ಹಣ ವರ್ಗಾಯಿಸಬೇಕು. ಈ ಬಗ್ಗೆ ಯಾರೊಂದಿಗೂ ಚರ್ಚಿಸಬಾರದು. ಸದಾ ವಿಡಿಯೋ ಕರೆಯಲ್ಲೇ ಇರಬೇಕು. ಕಡಿತ ಮಾಡಬಾರರು. ಗಂಟೆಗೊಮ್ಮೆ ನಿಮ್ಮ ಎಲ್ಲ ಚಟುವಟಿಕೆಗಳ ವರದಿ ನೀಡುತ್ತಿರಬೇಕು ಎಂದು ಹೇಳಿ ಡಿ.6 ರಿಂದ 12ರವರೆಗೆ ಹಂತ ಹಂತವಾಗಿ ಆರ್ಟಿಜಿಎಸ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಕುರಿತಂತೆ ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.