ಧಾರವಾಡ : ರೈತರ ಕೃಷಿ ಜಮೀನಿನ ಪಂಪ್ ಸೆಟ್ ಗಳಿಗೆ ಸರ್ಕಾರದ ನಿಯಮಾನುಸಾರ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಲಘಟಗಿ ತಾಲೂಕು ಪಂಚಾಯಿತಿಯಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ನಿಯಮದಂತೆ ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಆಯಾ ಭಾಗದ ಕಡೆ ಒಂದು ವಾರ ರಾತ್ರಿ ಇನ್ನೊಂದು ವಾರ ಹಗಲು ಹೊತ್ತಿನಲ್ಲಿ ಸಮಯ ನಿಗದಿಗೊಳಿಸಿ ವಿದ್ಯುತ್ ಪೂರೈಕೆ ಮಾಡಬೇಕು. ಅರಣ್ಯ ಪ್ರದೇಶದ ಕೃಷಿ ಜಮೀನುಗಳಿಗೆ ರಾತ್ರಿ ಮೂರು ಗಂಟೆಗೆ ವಿದ್ಯುತ್ ನೀಡಿದರೆ ಕಾಡುಪ್ರಾಣಿಗಳ ಹಾವಳಿಯಿಂದ ರೈತರಿಗೆ ಜಮೀನುಗಳಿಗೆ ಹೋಗಲು ತೊಂದರೆಯಾಗುತ್ತದೆ. ಅವರಿಗೆ ಹಗಲು ಹೊತ್ತಿನಲ್ಲಿ ಹೆಚ್ಚಿನ ಸಮಯ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಮಧ್ಯ ರಾತ್ರಿ ವಿದ್ಯುತ್ ನೀಡುವುದರಿಂದ ಮೈ ಕೊರೆಯುವ ಚಳಿಯಲ್ಲಿ ಜಮೀನುಗಳಿಗೆ ರೈತರು ತೆರಳಿ ಬೆಳೆಗೆ ನೀರು ಹಾಯಿಸಲು ಕಷ್ಟವಾಗುತ್ತಿದೆ ಎಂದು ರೈತರು ಮನವಿ ಮಾಡಿದ್ದರು. ಹೀಗಾಗಿ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಕೆ ಮಾಡುವಂತೆ ಸಚಿವರು ಸೂಚನೆ ನೀಡಿದ್ದಾರೆ.