ಮಂಡ್ಯ : ಮಂಡ್ಯದಲ್ಲಿ ಆಯೋಜಿಸಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೃಹತ್ ವೇದಿಕೆಯಲ್ಲಿ ಚಾಲನೆ ನೀಡಿ, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಸಿಎಂ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.
ಕರ್ನಾಟಕದಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆಯೆಂದು ಹೆಸರು ಪಡೆದಿರುವ, ಸಕ್ಕರೆ ನಗರಿ ಎಂದೇ ಪ್ರಸಿದ್ಧವಾಗಿರುವ ಮಂಡ್ಯದಲ್ಲಿ ಆಯೋಜಿಸಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮುಂದಿನ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾಷಣದ ಮುಖ್ಯಾಂಶಗಳು
* ನಾಡಿನ ಸಂಸ್ಕೃತಿಯ ಆರೋಗ್ಯಕ್ಕಾಗಿ ಶ್ರಮಿಸಿದ ಈ ಭಾಗದ ಎಲ್ಲ ಮಹನೀಯರನ್ನೂ ನಾವು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಲೇಬೇಕು. ಮನೆಯ ಒಡವೆಗಳನ್ನು ಮಾರಿ ನಾಲ್ವಡಿ ಕೃಷ್ಣರಾಜ ಒಡೆಯರ್‌ಅವರು ಕೃಷ್ಣರಾಜ ಸಾಗರ ಅಣೆಕಟ್ಟೆಯನ್ನು ಕಟ್ಟಿಸಿದರು. ಕಟ್ಟಿಸುವಾಗ ಟಿಪ್ಪು ಸುಲ್ತಾನನನ್ನು ಸಹ ಸ್ಮರಿಸಿಕೊಂಡಿದ್ದಾರೆ. ಆಧುನಿಕ ಮಂಡ್ಯದ ನಿರ್ಮಾಣದಲ್ಲಿ ಮೈಸೂರಿನ ಅರಸರು, ಶ್ರೀರ೦ಗಪಟ್ಟಣದ ಹೈದರ್ ಮತ್ತು ಟಿಪ್ಪು ಮುಂತಾದವರನ್ನು ಮರೆಯುವಂತೆಯೇ ಇಲ್ಲ. ಹಾಗೆಯೇ ಮಂಡ್ಯದ ಸ್ಫೂರ್ತಿಯಾದ ಎಚ್.ಕೆ.ವೀರಣ್ಣಗೌಡರು, ಕೆ.ವಿ.ಶಂಕರೇಗೌಡರು, ಎಸ್.ಸಿ.ಮಲ್ಲಯ್ಯ, ಜಿ.ಮಾದೇಗೌಡರು, ಎಂ.ಸಿ.ಬಂದೀಗೌಡರು, ಅಂಬರೀಶ್ ಅವರು ಮತ್ತು ಇತ್ತೀಚೆಗೆ ನಿಧನರಾದ ಎಸ್.ಎಂ.ಕೃಷ್ಣ ಮುಂತಾದವರನ್ನು ಮರೆಯಬಾರದು.
* ಮಂಡ್ಯ ಜಿಲ್ಲೆಯು ಅಪ್ಪಟ ಕನ್ನಡಿಗರು ವಾಸಿಸುವ ಜಿಲ್ಲೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಈ ಜಿಲ್ಲೆಯ ಕೊಡುಗೆ ಅಪಾರ. ಕ್ರಿ.ಶ. ೧೦ನೇ ಶತಮಾನದ ಆತಕೂರಿನ ಶಾಸನ ನಾಡಿನ ಹಳೆಯ ಶಾಸನಗಳಲ್ಲೊ೦ದು. ನಾಯಿಯೊಂದರ ವೀರ ಮರಣವೂ ಇತಿಹಾಸದಲ್ಲಿ ನೆಲೆ ನಿಲ್ಲುವಂತೆ ಮಾಡಿದ ಶಾಸನ ಮತ್ತು ಅಲ್ಲಿ ಬಳಕೆಯಾದ ಕನ್ನಡವನ್ನು ನಾವು ಮರೆಯಬಾರದು.
ಕವಿರಾಜಮಾರ್ಗವೆಂಬ ಕನ್ನಡದ ಪ್ರಮುಖ ಕೃತಿಯಲ್ಲಿ ಪ್ರಸ್ತಾಪಿಸಿರುವ ನಾಡಿನ ಗಡಿಗಳಾದ ಕಾವೇರಿಯಿಂದ – ಗೋದಾವರಿಯವರೆಗೆ ಎನ್ನುವಾಗ ಅದರ ಕೃತಿಕಾರ ಮಂಡ್ಯ ಸೀಮೆಯನ್ನು ಸ್ಮರಿಸಿರಲೇಬೇಕು ಎನ್ನುವ ಭಾವನೆ ನನ್ನದು.
* ಕಾವೇರಿ ಕಣಿವೆಯಲ್ಲಿರುವ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ, ಹೇಮಾವತಿ, ಶಿಂಷಾ, ಲೋಕಪಾವನಿ ಮುಂತಾದ ಜೀವನದಿಗಳು ಹರಿಯುತ್ತಿವೆ. ಕನ್ನಡ ಸಾಹಿತ್ಯ ಪರಂಪರೆಯನ್ನು ಸದಾಕಾಲಕ್ಕೂ ಮೆರೆಸಿರುವ ಮಂಡ್ಯ ಜಿಲ್ಲೆ, ಅಪ್ಪಟ ಕನ್ನಡದ ನೆಲ. ಭತ್ತದ ಕಣಜ, ಸಕ್ಕರೆ ನಾಡು ಎಂದೇ ಜನಜನಿತ. ಜಗತ್ತಿನ ಯಾವ ಮೂಲೆಯ ಭಾಷಿಕರೇ ಬ೦ದರೂ ಅವರಿಗೆ ಒಂದೇ ತಿಂಗಳಲ್ಲಿ ಕನ್ನಡವನ್ನು ಕಲಿಸುತ್ತೇವೆ ಎಂಬ ಭಾಷಾಭಿಮಾನ ಮತ್ತು ದಿಟ್ಟತನ ಮಂಡ್ಯದ ಜನರದ್ದು.
* ಮಂಡ್ಯ ಜಿಲ್ಲೆಯ ಸಾಹಿತ್ಯ – ಸಂಸ್ಕೃತಿಗಳ ಪರಂಪರೆ ಬಹಳ ಉತ್ಕೃಷ್ಟವಾದುದು. ಕನ್ನಡ ನಾಡಿಗೆ ಗೋವಿನ ಹಾಡು ಎಂಬ ಶ್ರೇಷ್ಠ ಸಾಹಿತ್ಯವನ್ನು ಕೊಟ್ಟನೆಲವಿದು.
ಇಂದು ಸಕ್ಕರೆ ನಾಡು, ಮಂಡ್ಯದಲ್ಲಿ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅವರಿಂದ ಉದ್ಘಾಟನೆಗೊಂಡ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ದಲ್ಲಿ ಅತ್ಯಂತ ಸಂತೋಷದಿಂದ ಪಾಲ್ಗೊಂಡಿದ್ದೇನೆ.
* ಸಕ್ಕರೆ ಸೀಮೆಯಾದ ಮಂಡ್ಯದ ಈ ಸಮ್ಮೇಳನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಹಾಗೂ ದೇಶ – ವಿದೇಶಗಳಿಂದಲೂ ಸಾಹಿತ್ಯದ ಅಭಿಮಾನಿಗಳು ಬಂದಿದ್ದೀರಿ. ಅಖಿಲ ಭಾರತ ಮಟ್ಟದಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ನಿಜಾರ್ಥದಲ್ಲಿ ಕನ್ನಡದ ಹಬ್ಬವೇ ಆಗಿದೆ.
"ಸಕ್ಕರೆ ನಾಡು ಮಂಡ್ಯದಲ್ಲಿ ಕನ್ನಡದ ನುಡಿ ಹಬ್ಬ"
ಇಂದಿನಿಂದ ಆರಂಭಗೊಂಡಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯ ಕ್ಷಣಗಳು#ಕನ್ನಡಸಾಹಿತ್ಯಸಮ್ಮೇಳನ pic.twitter.com/azD0RpjHFn— Siddaramaiah (@siddaramaiah) December 20, 2024