ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರು ಕೂಡ ಸರ್ಕಾರಿ ನೌಕರರರೇ. ಸರ್ಕಾರಿ ನೌಕರರ ಸಂಘದ ಅಡಿಯಲ್ಲೇ ಕಾರ್ಯ ನಿರ್ವಹಿಸುವವರು. ಇಂದು ಆರ್ ಡಿ ಪಿಆರ್ ಇಲಾಖೆಯ ಕ್ರೀಡಾ ಹಬ್ಬ ನಡೆಯುತ್ತಿದೆ. ಆದರೇ ಈ ಕ್ರೀಡಾ ಹಬ್ಬಕ್ಕೆ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನೇ ಆಹ್ವಾನಿಸದೇ ಇರುವುದಾಗಿ ತಿಳಿದು ಬಂದಿದೆ.
ಇಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ನೌಕರರ ಸಂಘದ ಸಾಗರ ಶಾಖೆಯ ವತಿಯಿಂದ ಆರ್ ಡಿ ಪಿ ಆರ್ ಕ್ರೀಡಾ ಹಬ್ಬ2024-25 ಆಯೋಜಿಸಲಾಗಿದೆ. ಸಾಗರದ ನೆಹರೂ ಕ್ರೀಡಾಂಗಣದಲ್ಲಿ ಈ ಕ್ರೀಡಾಹಬ್ಬ ನಡೆಯಲಿದೆ.
ಈ ಕ್ರೀಡಾಹಬ್ಬಕ್ಕೆ ಸಾಗರ ತಾಲ್ಲೂಕಿನ ಪ್ರಥಮ ಪ್ರಜೆ ಹಾಗೂ ಶಾಸಕರಾದಂತ ಬೇಳೂರು ಗೋಪಾಲಕೃಷ್ಣ, ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಸಿಇಓ ಹೇಮಂತ್ ಎನ್, ಸಾಗರ ಉಪ ವಿಭಾಗಾಧಿಕಾರಿ ಯತೀಶ್.ಆರ್ ಸೇರಿದಂತೆ ಇತರೆ ಗಣ್ಯರನ್ನು ಸಾಗರ ತಾಲ್ಲೂಕು ಪಿಡಿಓ ನೌಕರರ ಸಂಘದ ಅಧ್ಯಕ್ಷರಾದಂತ ಪ್ರವೀಣ್ ಕುಮಾರ್.ಆರ್ ಆಹ್ವಾನಿಸಿದ್ದಾರೆ.
ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘವನ್ನೇ ಹೊರಗಿಟ್ಟು ಕ್ರೀಡಾಹಬ್ಬ ಆಯೋಜನೆ
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘವು ಸರ್ಕಾರಿ ನೌಕರರ ಸಂಘದ ಅಡಿಯಲ್ಲಿನ ಸಂಘವಾಗಿದೆ. ಇದರ ಅಧ್ಯಕ್ಷರಾದಂತ ಪ್ರವೀಣ್ ಕುಮಾರ್.ಆರ್ ಅವರು ಶಿಷ್ಟಾಚಾರದ ಪ್ರಕಾರವಾಗಿ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸಬೇಕಿತ್ತು. ಅದರಂತೆ ಆಹ್ವಾನ ಪತ್ರಿಕೆಯಲ್ಲೂ ಪದಾಧಿಕಾರಿಗಳ ಹೆಸರನ್ನು ನಮೂದಿಸಬೇಕಿತ್ತು. ಆದರೇ ಇದ್ಯಾವುದನ್ನೂ ಮಾಡದೇ, ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನೇ ಕಡೆಗಣಿಸಿರುವಂತ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಅವರು, ಇದು ಇಲಾಖೆಯ ಕಾರ್ಯಕ್ರಮವಾಗಿದೆ. ಹೀಗಾಗಿ ಆಹ್ವಾನಿಸಿಲ್ಲ. ಅಲ್ಲದೇ ಕೆಲ ವಿಚಾರಗಳ ಕಾರಣದಿಂದ ಆಹ್ವಾನಿಸಿಲ್ಲ. ಸಂಘದ ಪದಾಧಿಕಾರಿಗಳ ಜೊತೆಗೆ ಮಾತನಾಡುವುದಾಗಿ ತಿಳಿಸಿದ್ದಾರೆ.
ಇನ್ನೂ ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಅವರನ್ನು ಇದೇ ವಿಚಾರಕ್ಕಾಗಿ ಕನ್ನಡ ನ್ಯೂಸ್ ನೌ ಸಂಪಾದಕ ವಸಂತ ಬಿ ಈಶ್ವರಗೆರೆ ಸಂಪರ್ಕಿಸಿ, ಈ ವಿಚಾರ ಗಮನಕ್ಕೆ ತರಲಾಯಿತು. ಅವರು ಹೀಗೆ ಮಾಡುವುದು ಸರಿಯಲ್ಲ. ಸರ್ಕಾರಿ ನೌಕರರ ಕಾರ್ಯಕ್ರಮವಾಗಿರುವ ಕಾರಣ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸಬೇಕಿತ್ತು. ಯಾಕೆ ಆಹ್ವಾನಿಸಿಲ್ಲ ಅಂತ ಶಿವಮೊಗ್ಗ ಜಿಲ್ಲಾ ಪಿಡಿಓ ನೌಕರರ ಸಂಘದ ಅಧ್ಯಕ್ಷರಲ್ಲಿ ಮಾತನಾಡುವುದಾಗಿ ತಿಳಿಸಿದರು.
ಆರ್ ಡಿ ಪಿ ಆರ್ ಕ್ರೀಡಾಹಬ್ಬ ಸರ್ಕಾರಿ ನೌಕರರ ಕ್ರೀಡಾಕೂಟವಾಗಿದೆ. ಇಲ್ಲಿ ಭಾಗಿಯಾಗುವವರು ಸರ್ಕಾರಿ ನೌಕರರು. ಸರ್ಕಾರಿ ನೌಕರರ ಬೇಕು, ಬೇಡಗಳಿಗೆ ಧ್ವನಿಯಾಗಿ, ಅವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರೋದು ಸರ್ಕಾರಿ ನೌಕರರ ಸಂಘವಾಗಿದೆ. ಎಲ್ಲಾ ಇಲಾಖೆಯ ಮಾತೃ ಸಂಘ ಸರ್ಕಾರಿ ನೌಕರರ ಸಂಘವಾಗಿದೆ. ಇಂತಹ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನೇ ಹೊರಗಿಟ್ಟು ಕ್ರೀಡಾಹಬ್ಬ ಆಚರಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದರ ಹಿಂದಿನ ನಿಜವಾದ ಕಾರಣ ಏನೆಂಬುದು ಆಯೋಜಕರೇ ಸ್ಪಷ್ಟ ಪಡಿಸಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು