ಬೆಂಗಳೂರು : ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅವಮಾನಿಸಿದ ಆರೋಪದ ಮೇಲೆ ಬಿಜೆಪಿ ಶಾಸಕ ಸಿ.ಟಿ. ರವಿಯನ್ನು ಬಂಧಿಸಲಾಗಿದೆ. ಈ ಮಧ್ಯೆ ಕರ್ನಾಟಕ ಕಾಂಗ್ರೆಸ್ ಸಮಿತಿ ಮಹಿಳಾ ಆಯೋಗಕ್ಕೆ ದೂರು ನೀಡಿದೆ. ಸಿಟಿ ರವಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಈಗಾಗಲೇ ನಿನ್ನೆ ಬೆಳಗಾವಿಯ ಹಿರೇ ಬಾಗೇವಾಡಿ ಪೊಲೀಸರು ಎಂಎಲ್ಸಿ ಸಿಟಿ ರವಿ ಅವರನ್ನು ಅರೆಸ್ಟ್ ಮಾಡಿ ಇಂದು ಬೆಂಗಳೂರಿನ ಜೆಎಂಎಫ್‌ಸಿ ಕೋರ್ಟಿಗೆ ಹಾಜರುಪಡಿಸಿದ್ದರು. ಈ ಸಂದರ್ಭದಲ್ಲಿ ಉಚ್ಚಾರಣೆ ಬಳಿಕ ಜಡ್ಜ್ ಸ್ಪರ್ಶ ಡಿಸೋಜ ಅವರು ಈ ಒಂದು ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಪೊಲೀಸರು ಸಿಟಿ ರವಿ ಅವರನ್ನು ಬೆಂಗಳೂರಿಗೆ ಕರೆದೊಯ್ಯುತ್ತಿದ್ದಾರೆ. ಈಗಾಗಲೇ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಡ್ಜ್ ಸಂತೋಷ ಭಟ್ ಅವರು ಪ್ರಕರಣದ ಕುರಿತು ವಿಚಾರಣೆ ಆರಂಭಿಸಿದ್ದಾರೆ.
ಬೆಳಗಾವಿ ಅಧಿವೇಶನ ನಡೆಯುತ್ತಿದ್ದ ಸುವರ್ಣ ಸೌಧದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಕ್ಟರ್ ಅವರಿಗೆ ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ. ರವಿ ಅವರು ಅಸಭ್ಯ ಮತ್ತು ಅಸಂವಿಧಾನಿಕ ಪದ ಬಳಕೆ ಮಾಡಿ ಅಪಮಾನಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ.
ಮಾಜಿ ಮಂತ್ರಿಯಾಗಿದ್ದು, ಹೆಣ್ಣು ಮಕ್ಕಳ ಬಗ್ಗೆ ಅಪಾರ ಕಾಳಜಿ, ಗೌರವ ಹೊಂದಿರಬೇಕಾದ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಯೇ ಘನತವತ್ತ ಸದನದಲ್ಲಿ ಮಹಿಳಾ ಮಂತ್ರಿಯೊಬ್ಬರನ್ನು ಅತೀ ಕೀಳು ಮಟ್ಟದ ಅಸಾಂವಿಧಾನಿಕ ಪದ ಪ್ರಯೋಗ ಮಾಡಿದ್ದರೆ ಅದು ನಾಡಿನ ಇಡೀ ಹೆಣ್ಣು ಕುಲಕ್ಕೇ, ಅವರ ಭಾವನೆಗಳಿಗೆ, ಅವರ ಘನತೆಗೆ ಉಂಟು ಮಾಡಿರುವ ಅಪಮಾನ. ಹಾಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕೆಂದು ಎಂದು ದೂರಿನಲ್ಲಿ ಕೋರಲಾಗಿದೆ.