ಬೆಳಗಾವಿ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕುರಿತಂತೆ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರು ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ನಿನ್ನೆ ಬೆಳಗಾವಿಯ ಹಿರೇಬಾಗೇವಾಡಿ ಠಾಣೆಯಲ್ಲಿ FIR ದಾಖಲಾಗಿತ್ತು. ಇಂದು ಪೊಲೀಸರು ಬೆಳಗಾವಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಕರೆತಂದು ಸಿಟಿ ರವಿ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಈ ವೇಳೆ ನ್ಯಾಯಾಧೀಶರು ವಿಚಾರಣೆಯನ್ನು ಆರಂಭಿಸಿದರು. ಬೆಳಗಾವಿಯ ಜೆಎಂಎಫ್ ಸಿ ಕೋರ್ಟಲ್ಲಿ ವಿಚಾರಣೆ ಆರಂಭವಾದಾಗ ಜಡ್ಜ್ ಗೆ ಕೈಮುಗಿದು ನಿಂತಾಗ ನ್ಯಾಯಾಧೀಶೆ ನಿಮ್ಮ ವಯಸ್ಸು ಎಷ್ಟು ಎಂದು ಕೇಳಿದರು. ಈ ವೇಳೆ ಸಿಟಿ ರವಿ ಅವರು 58 ವರ್ಷ ಎಂದು ತಿಳಿಸಿದರು. ಈ ವೇಳೆ ಸಿಟಿ ರವಿ ಪರ ವಕೀಲ ಎಂಬಿ ಜಿರಲಿ ವಾದ ಆರಂಭಿಸಿದರು.
ಈ ವೇಳೆ ಸಿಟಿ ರವಿ ಅವರಿಗೆ ನಿಮ್ಮನ್ನು ಅರೆಸ್ಟ್ ಎಲ್ಲಿ ಮಾಡಿದ್ದಾರೆ ಎಂದು ಜಡ್ಜ್ ಕೇಳಿದರು. ನಿನ್ನೆ ಸಂಜೆ 6:30 ಸುಮಾರಿಗೆ ಸುವರ್ಣ ಸೌಧದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾತ್ರಿ ಇಡೀ 10 ಗಂಟೆಗಳ ಕಾಲ ಮೂರು ಜಿಲ್ಲೆಗಳನ್ನು ಸುತ್ತಿಸಿದ್ದಾರೆ ಎಂದು ಸಿಟಿ ರವಿಯವರು ಜಡ್ಜ್ ಗೆ ಉತ್ತರಿಸಿದರು. ಇಲ್ಲಿ ಬರೋವರೆಗೂ ನಿಗೂಢ ಜಾಗಕ್ಕೆ ಕರೆದುಕೊಂಡು ಹೋಗ್ತಾ ಇದ್ರು. ಕ್ರಷರ್ ಕಬ್ಬಿನ ಗದ್ದೆಗೆ ಎಲ್ಲ ಪೊಲೀಸರು ಕರೆದುಕೊಂಡು ಹೋಗಿದ್ದರು ಎಂದು ಉತ್ತರಿಸಿದರು.
ಖಾನಾಪುರದಲ್ಲಿ ನನಗೆ ಹೊಡೆದರು. ತಲೆಯಲ್ಲಿ ನನಗೆ ರಕ್ತ ಸಹ ಬರುತ್ತಿತ್ತು ಎಂದು ನ್ಯಾಯಾಧೀಶರ ಬಳಿ ಪೊಲೀಸರ ವಿರುದ್ಧ ಆರೋಪ ಮಾಡಿದರು. ಈ ವೇಳೆ ಯಾರು ಹೊಡೆದರು ಎಂದು ಜಡ್ಜ್ ಕೇಳಿದಾಗ ಯಾರು ಹೊಡೆದರು ಅಂತ ಗೊತ್ತಿಲ್ಲ. ಆದರೆ ಪೊಲೀಸರೇ ಹೊಡೆದಿರಬಹುದು ಎಂದು ಸಿಟಿ ರವಿ ಅವರು ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದರು.