ಜೈಪುರ: ರಾಜಧಾನಿ ಜೈಪುರದ ಅಜ್ಮೀರ್ ರಸ್ತೆಯಲ್ಲಿ ಇಂದು ಮುಂಜಾನೆ ಸಿಎನ್‌ಜಿ ಗ್ಯಾಸ್ ತುಂಬಿದ ಟ್ಯಾಂಕರ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿದ ನಂತರ ಹಲವಾರು ವಾಹನಗಳಲ್ಲಿ ಸಂಭವಿಸಿದ ಬೆಂಕಿಯಲ್ಲಿ 4 ಜನರು ಸಜೀವ ದಹನವಾಗಿದ್ದಾರೆ ಎಂದು ವರದಿಯಾಗಿದೆ.
ಈ ಹೃದಯ ವಿದ್ರಾವಕ ಅಪಘಾತದಲ್ಲಿ ಸುಟ್ಟುಹೋದ ಜನರನ್ನು ಸವಾಯಿ ಮಾನ್ಸಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಭೀಕರ ಅಪಘಾತದ ಬಗ್ಗೆ ಮಾಹಿತಿ ಪಡೆದ ಸಿಎಂ ಭಜನ್‌ಲಾಲ್ ಶರ್ಮಾ ಕೂಡ ಗಾಯಾಳುಗಳನ್ನು ಭೇಟಿ ಮಾಡಲು ಅಲ್ಲಿಗೆ ಬಂದಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಅಜ್ಮೀರ್ ರಸ್ತೆಯ ಭಂಕ್ರೋಟಾ ಪೆಟ್ರೋಲ್ ಪಂಪ್ ಬಳಿ ಈ ಅಪಘಾತ ಸಂಭವಿಸಿದೆ. ಈ ಅವಘಡದಲ್ಲಿ ಸುಮಾರು ಒಂದೂವರೆ ಡಜನ್ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಆ ಎಲ್ಲಾ ವಾಹನಗಳೂ ಸುಟ್ಟು ಭಸ್ಮವಾಗಿವೆ. ಅಪಘಾತದ ನಂತರ, ಅಜ್ಮೀರ್ ರಸ್ತೆಯಲ್ಲಿ ಹಲವಾರು ಕಿಲೋಮೀಟರ್ ಉದ್ದದ ಜಾಮ್ ಇದೆ. ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸುಟ್ಟು ಕರಕಲಾದ ವಾಹನಗಳಲ್ಲಿದ್ದವರಿಗಾಗಿ ಶೋಧ ನಡೆಯುತ್ತಿದೆ.