ಬೆಂಗಳೂರು: ರಾಜ್ಯದ 46,755 ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ 1,65,618 ಕಾರ್ಯನಿರತ ಶಿಕ್ಷಕರ ಹುದ್ದೆಗಳಿವೆ. ಇವುಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧುಬಂಗಾರಪ್ಪ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಕೆ. ಗೋಪಾಲಯ್ಯ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ರಾಜ್ಯದಲ್ಲಿ ಒಟ್ಟು 46,755 ಶಾಲೆಗಳಿದ್ದು, 1,65,618 ಶಿಕ್ಷಕರ ಕಾರ್ಯನಿರತ ಹುದ್ದೆಗಳಿವೆ. ಪ್ರಾಥಮಿಕ ಶಿಕ್ಷಣದಲ್ಲಿ 50,067 ಹಾಗೂ ಪ್ರೌಢಶಾಲೆಗಳಲ್ಲಿ 9,705 ಹುದ್ದೆಗಳು ಖಾಲಿ ಇವೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ 45 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. 2024ರ ಅಕ್ಟೋಬರ್ 28 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಹೊರಡಿಸಬಾರದು ಎಂದು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಿಂದಿನ ಸರ್ಕಾರ ಕೇವಲ 4500 ಶಿಕ್ಷಕರನ್ನು ನೇಮಕ ಮಾಡಿದ್ದು, ನಮ್ಮ ಸರ್ಕಾರದಲ್ಲಿ 13000 ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 5300 ಹುದ್ದೆಗಳ ಭರ್ತಿಗೆ ಒಪ್ಪಿಗೆ ನೀಡಲಾಗಿದೆ. 2022ರಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕರ 15,000 ಹುದ್ದೆಗಳ ನೇಮಕಾತಿಗೆ ಆಧಿಸೂಚನೆ ಹೊರಡಿಸಿದ್ದು, ಅರ್ಹತೆ ಪಡೆದ 13,352 ಅಭ್ಯರ್ಥಿಗಳಲ್ಲಿ 12,521 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. ಉಳಿದ ಅಭ್ಯರ್ಥಿಗಳ ಪ್ರಕರಣ ನ್ಯಾಯಾಲಯದಲ್ಲಿದೆ.ಕಳೆದ ಮೂರು ವರ್ಷಗಳಲ್ಲಿ 20 ಕೊಠಡಿಗಳ ನಿರ್ಮಾಣಕ್ಕೆ 278 ಲಕ್ಷ ರೂ. ಮಂಜೂರಾಗಿದ್ದು, ಈಗಾಗಲೇ 241.19 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಹೇಳಿದರು.