ಮಂಡ್ಯ : ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನವು ಇದೇ ಡಿಸೆಂಬರ್ 20,21 ಮತ್ತು 22 ರಂದು ಮಂಡ್ಯದಲ್ಲಿ ನಡೆಯಲಿದ್ದು, ಅಧಿಕೃತವಾಗಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಮ್ಮೇಳನಾಧ್ಯಕ್ಷ ಡಾ.ಗೊ.ರು. ಚೆನ್ನಬಸಪ್ಪ ಉಪಸ್ಥಿತರಿರುವರು. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್, ಸಚಿವ ಎನ್. ಚಲುವರಾಯಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.ಬೆಳಗ್ಗೆ 10:30 ಕ್ಕೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಇದಕ್ಕಿಂತ ಮೊದಲು ಬೆಳಿಗ್ಗೆ ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ.
ಈ ಸಮ್ಮೇಳನದಲ್ಲಿ ಮೂರು ವೇದಿಕೆಗಳಿದ್ದು 27 ವಿಚಾರಗೋಷ್ಠಿಗಳಲ್ಲಿ 150 ವಿದ್ವಾಂಸರು ನಾಡಿಗೆ ಸಂಬಂಧಿಸಿದ ವಿವಿಧ ವಿಚಾರಗಳ, ಸಮಸ್ಯೆಗಳ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ. “ಮಂಡ್ಯ ಜಿಲ್ಲೆಗೆ ಕೊಡುಗೆ ನೀಡಿದ ಮಹನೀಯರ ಕುರಿತು”, ಕನ್ನಡ ನಾಡಿನ ಜಲ ನೆಲ ಸಾಕ್ಷರತೆಯ ಕುರಿತು ಅವಲೋಕನ, “ಸಾಹಿತ್ಯದಲ್ಲಿ ರಾಜಕೀಯ – ರಾಜಕೀಯದಲ್ಲಿ ಸಾಹಿತ್ಯ” ಕರ್ನಾಟಕ 50 ಹಿನ್ನೋಟ- ಮುನ್ನೋಟ, ಕರ್ನಾಟಕದ ಮೌಖಿಕ ಪರಂಪರೆಗಳ ಪ್ರದರ್ಶನ ಮತ್ತು ವಿವರಣೆ, ಸಮ್ಮೇಳನ ಅಧ್ಯಕ್ಷರ ಜೊತೆಗೆ ಸಂವಾದ, ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗ್ಗೆ, ಸರಕಾರಿ ಶಾಲೆಗಳ ಸಬಲೀಕರಣ ಹೀಗೆ ಹತ್ತು ಹಲವು ವಿಷಯದಲ್ಲಿ ವಿಚಾರಗೋಷ್ಠಿ ಯೋಜನೆಗೊಂಡಿವೆ.
ನಾಲ್ಕು ಕವಿಗೋಷ್ಠಿಯನ್ನು ಆಯೋಜಿಸಲಾಗಿದ್ದು, 83 ಕವಿಗಳು ಪಾಲ್ಗೊಳ್ಳಲಿದ್ದಾರೆ. ಈ ಬಾರಿ ವಿಶೇಷವಾಗಿ ಅಂಧರ ಕವಿಗೋಷ್ಠಿ ಏರ್ಪಡಿಸಲಾಗಿದ್ದು 10 ಮಂದಿ ಅಂದ ಕವಿಗಳು ಕವನವಾಚನ ಮಾಡಲಿದ್ದಾರೆ. ಮಹಿಳಾ ಕವಿಗಳ ಕವಿಗೋಷ್ಠಿ ನಡೆಯಲಿದೆ. 87ನೇ ಸಾಹಿತ್ಯ ಸಮ್ಮೇಳನವಾದ್ದರಿಂದ 87 ಸಾಧಕರನ್ನು ಮತ್ತು ಕರ್ನಾಟಕ ಸುವರ್ಣ ಸಂಭ್ರಮದ ಕುರಿತು 50 ಸಾಧಕರನ್ನು ಒಟ್ಟಾಗಿ 137 ಸಾಧಕರನ್ನು ಸನ್ಮಾನಿಸಲಾಗುತ್ತಿದೆ.